*ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದರೂ ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ದಿ ಆಗದಿರುವುದು ಬೇಸರ ಸಂಗತಿ: ಬಸವರಾಜ ಬೊಮ್ಮಾಯಿ

 

ಹುಬ್ಬಳ್ಳಿ: ಸ್ವಾತಂತ್ರ್ಯ ಬಂದು ಎಪ್ಪತೈದು ವರ್ಷ ಕಳೆದರೂ ಶಿಕ್ಷಣ‌ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗದಿರುವುದು ಬೇಸರದ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ಹುಬ್ಬಳ್ಳಿ ತಾಲೂಕು ಛಬ್ಬಿ ಗ್ರಾಮದಲ್ಲಿ ನೂತನ ಹೈಸ್ಕೂಲ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಶಾಲಾ ಕೊಠಡಿಗಳ ಕೊರತೆ ಇರುವುದನ್ನು ಮನಗಂಡು ನಾನು 9235 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ಮಾಡಿದೆ. ಬಸವರಾಜ ಹೊರಟ್ಟಿಯವರು ಶಿಕ್ಷಣ ಮಂತ್ರಿಯಾಗಿದ್ದಾಗ 1000 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಆದೇಶ ನೀಡಿದ್ದರು. ಯಾಕೆಂದರೆ ಶಾಲಾ ಕೊಠಡಿಗಳ ಸಂಖ್ಯೆ ಮತ್ತು ವಿದ್ಯಾರ್ಥಿಗಳ ಸಂಖ್ಯೆಗೆ ಬಹಳ ವ್ಯತ್ಯಾಸ ಇದೆ. ಈಗಿನ ಸರ್ಕಾರ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ಮುಂದುವರೆಸಬೇಕು. ಮುಂದಿನ ಎರಡು ವರ್ಷ ಇಷ್ಟೇ ಶಾಲಾ ಕೊಠಡಿಗಳ ನಿರ್ಮಾಣ ಮಾಡಬೇಕು ಎಂದರು.

ನಮ್ಮ ಅವಧಿಯಲ್ಲಿ ಅತಿ ಹೆಚ್ಚು ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಇನ್ನೂ ಐದು ಸಾವಿರ ಕೊಠಡಿಗಳ ನಿರ್ಮಾಣ ಕಾರ್ಯ ನಡೆದಿದೆ. ಸರ್ಕಾರ ಯಾವುದಕ್ಕಾದರೂ ಅನುದಾನ ಕಡಿತ ಮಾಡಲಿ ಆದರೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಅನುದಾನ ಕಡಿತ ಮಾಡಬಾರದು ಎಂದು ಆಗ್ರಹಿಸಿದರು.

ನಾನು ಛಬ್ಬಿ ಗ್ರಾಮ ವಾಸ್ತವ್ಯಕ್ಕೆ ಬಂದಾಗ ಒಂದು ಕೋಟಿ ರೂಪಾಯಿ ಮಂಜೂರು ಮಾಡಿದ್ದೆ ಅದರಿಂದ ಶಾಲಾ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. 21 ನೇ ಶತಮಾನ ಜ್ಞಾನದ ಶತಮಾನ ಜ್ಣಾನ ಇಲ್ಲದೆ ಏನೂ ಮಾಡಲು ಆಗುವುದಿಲ್ಲ. ಒಂದು ಕಾಲದಲ್ಲಿ ಜಮೀನು ಇದ್ದವರ ಕಾಲ ಇತ್ತು ಅದಕ್ಕೆ ಅಲೆಕ್ಸಾಂಡರ್ ನ ಬಗ್ಗೆ ಮಾತನಾಡುತ್ತೇವೆ. ಮತ್ತೆ ಯಾರು ವ್ಯಾಪಾರ ಮಾಡುತ್ತಿದ್ದರೋ ಅವರ ಕಾಲ ಇತ್ತು ಅದಕ್ಕೆ ಬ್ರಿಟೀಷರು ನಮ್ಮನ್ನು ಆಳಿದರು‌. ಈಗ ಜ್ಞಾನ ಇರುವವರ ಕಾಲ ಎಂದರು.

ಸರಸ್ವತಿ ವಾಹನ ಪರಮಹಂಸ ಅತ್ಯಂತ ಎತ್ತರಕ್ಕೆ ಹಾರುವ ಪಕ್ಷೊಯಾಗಿದ್ದು, ಅತ್ಯಂತ ಶುಭ್ರವಾಗಿರುತ್ತದೆ. ಜ್ಞಾನವೂ ವಿದ್ಯಾರ್ಥಿಗಳನ್ನು ಅತ್ಯಂತ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ. ಮುಂದೇನಾಗಬೇಕೆಂದು ಈಗಲೇ ಕನಸು ಕಾಣಬೇಕು, ಅದರ ಸಾಧನೆಗೆ ವಿದ್ಯಾರ್ಥಿಗಳು ಈಗಿನಿಂದಲೇ ಶ್ರಮವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಎಂ.ಆರ್. ಪಾಟೀಲ್, ಚಿತ್ರನಟ ರಿಷಬ್ ಶೆಟ್ಟಿ, ಪತ್ರಕರ್ತ ಅಜಿತ್ ಹನುಮಕ್ಕನವರ ಹಾಜರಿದ್ದರು.

Loading

Leave a Reply

Your email address will not be published. Required fields are marked *