ವೈದ್ಯೋ ನಾರಾಯಣ ಹರಿ ಎನ್ನುವ ಮಾತು ನೂರಕ್ಕೆ ನೂರು ಸತ್ಯ

*ಪ್ರಶಸ್ತಿ ಪುರಸ್ಕೃತ ವೈದ್ಯರು ಉಳಿದ ವೈದ್ಯ ಸಮೂಹಕ್ಕೆ ಮಾದರಿ ಆಗಬೇಕು

 

 

*ಕೋವಿಡ್ ಸಂದರ್ಭದಲ್ಲಿ ವಿಶ್ವದ ಅನೇಕ ವೈದ್ಯರು ತಮ್ಮ ಪ್ರಾಣ ಒತ್ತೆ ಇಟ್ಟು ಜನರ ಪ್ರಾಣ ಉಳಿಸಿದ್ದನ್ನು ಮರೆಯಲಾಗದು*

 

 

*ವೈದ್ಯರಿಗೆ ಅಂತಃಕರಣ ಹೆಚ್ಚಾಗಬೇಕು: ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ*

 

ಬೆಂಗಳೂರು, ಜು1: ಹಣವಂತರಿಗೆ ಆರೋಗ್ಯ ಸೇವೆ ಪಡೆದುಕೊಳ್ಳುವುದು, ಆರೋಗ್ಯ ರಕ್ಷಣೆ ಕಷ್ಟದ ಕೆಲಸವಲ್ಲ. ಬಡವರಿಗೆ ಆರೋಗ್ಯ ಭಾಗ್ಯ ಕಲ್ಪಿಸುವ ಜವಾಬ್ದಾರಿ ಸರ್ಕಾರಿ ವೈದ್ಯರ ಮೇಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವೈದ್ಯರಿಗೆ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.

 

ಸಮಾಜದಲ್ಲಿ ತಾರತಮ್ಯದ ಇರುವ ಕಾರಣಕ್ಕೆ ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ಒಳ್ಳೆ ಅವಕಾಶಗಳು ಸಿಗುತ್ತಿಲ್ಲ. ಬಡವರು ಖಾಸಗಿ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಬಾರದ ರೀತಿಯಲ್ಲಿ ಸರ್ಕಾರಿ ವೈದ್ಯರು ವೃತ್ತಿಪರತೆ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

 

ಹಳ್ಳಿಗಳಿಂದ, ಬಡತನ, ಶೋಷಿತ, ಹಿಂದುಳಿದ ಕೌಟುಂಬಿಕ ಹಿನ್ನೆಲೆಯಿಂದ ಬರುತ್ತಿರುವ ವೈದ್ಯರ ಪ್ರಮಾಣವೇ ಹೆಚ್ಚಾಗಿದೆ. ಇವರು ಗ್ರಾಮೀಣ ಭಾಗಗಳಲ್ಲಿ ಕೆಲಸ ಮಾಡಲು ಹೆಚ್ಚು ಉತ್ಸಾಹದಿಂದ ಸ್ವಯಂಪ್ರೇರಿತವಾಗಿ ಮುಂದೆ ಬರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳು ತಮ್ಮದೇ ಹಿನ್ನೆಲೆಯವರು ಎನ್ನುವುದನ್ನು ಮರೆಯಬಾರದು.

 

ಅಗತ್ಯ ಸವಲತ್ತುಗಳನ್ನು ತಕ್ಕ ಮಟ್ಟಿಗೆ ದೊರಕಿಸಿಕೊಟ್ಟರೂ ಗ್ರಾಮೀಣ ಭಾಗದಲ್ಲಿ ವೈದ್ಯರು ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿ.

 

ಸರ್ವರಿಗೂ ಉತ್ತಮ ಆರೋಗ್ಯ, ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯ. ಜನರ ಈ ನಿರೀಕ್ಷೆಗೆ ತಕ್ಕಂತೆ ಸರ್ಕಾರಿ ವೈದ್ಯರು, ಖಾಸಗಿ ವೈದ್ಯರು ಕರ್ತವ್ಯ ನಿರ್ವಹಿಸಬೇಕು ಎಂದರು.

 

ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಆಗಿದ್ದ ಬಿಧಾನ್ ಚಂದ್ರ ರಾಯ್ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ವೈದ್ಯ ವೃತ್ತಿ ಮುಂದುವರೆಸಿದ್ದರು. ಜನರಿಗೆ ಆರೋಗ್ಯ ಸೇವೆ ನೀಡುತ್ತಿದ್ದರು. ಹೀಗಾಗಿ ಭಾರತ ರತ್ನ ಎನಿಸಿಕೊಂಡರು. ಪ್ರತಿಯೊಬ್ಬ ವೈದ್ಯರಿಗೂ ಬಿ.ಸಿ.ರಾಯ್ ಮಾದರಿ ಆಗಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

 

ಎಲ್ಲರೂ ಅಂಬೇಡ್ಕರ್ ಆಗಲು, ಬುದ್ದ ಆಗಲು, ಗಾಂಧಿ ಆಗಲು ಸಾಧ್ಯವಿಲ್ಲ. ಆದರೆ ಅವರ ದಾರಿಯಲ್ಲಿ ನಡೆಯಲು ಎಲ್ಲರಿಗೂ ಸಾಧ್ಯವಿದೆ. ವೈದ್ಯ ಸಮುದಾಯ ಡಾಕ್ಟರ್ ಬಿಧಾನ್ ಚಂದ್ರ ರಾಯ್ ಅವರು ಹಾಕಿಕೊಟ್ಟ ಮಾದರಿ ದಾರಿಯಲ್ಲಿ ನಡೆಯಲು ಶ್ರಮಿಸಬೇಕು ಎಂದು ಕರೆ ನೀಡಿದರು.

 

ವೇದಿಕೆಯಲ್ಲಿ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ , ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಶಾಸಕ ರಿಜ್ವಾನ್ ಹರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Loading

Leave a Reply

Your email address will not be published. Required fields are marked *