”ಪಂಜಾಬ್ ಮೇಲೆ ಭಾರತೀಯ ಸರಕಾರ ತನ್ನ ಅಧಿಪತ್ಯ ಮುಂದುವರಿಸಿದರೆ ಇಸ್ರೇಲ್ ಮೇಲೆ ನಡೆದ ಹಮಾಸ್ ಉಗ್ರರ ದಾಳಿ ಮಾದರಿಯಲ್ಲೇ ಭಾರತದ ಮೇಲೂ ದಾಳಿ ಮಾಡಲಾಗುವುದು,” ಎಂದು ಖಲಿಸ್ತಾನಿ ಬೆಂಬಲಿತ ನಿಷೇಧಿತ ಉಗ್ರಗಾಮಿ ಸಂಘಟನೆ ‘ಸಿಖ್ ಫಾರ್ ಜಸ್ಟೀಸ್’ (ಎಸ್ಎಫ್ಜೆ) ಸಂಘಟನೆ ಬೆದರಿಕೆ ಹಾಕಿದೆ.ಸಾಮಾಜಿಕ ಜಾಲ ತಾಣದಲ್ಲಿ ಬೆದರಿಕೆ ಹಾಕಿರುವ ವಿಡಿಯೋ ಹಂಚಿಕೊಂಡಿರುವ ಎಸ್ಎಫ್ಜೆ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು, ”ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದಿಂದ ಪ್ರಧಾನಿ ಮೋದಿ ಪಾಠ ಕಲಿಯಲಿ. ಪಂಜಾಬ್ ಮೇಲೆ ದೌರ್ಜನ್ಯ ಮುಂದುವರಿಸಿದರೆ ಮುಂದೊಂದು ದಿನ ಇದೇ ಸನ್ನಿವೇಶ ಭಾರತದಲ್ಲೂ ಘಟಿಸಲಿದೆ,” ಎಂದು ಎಚ್ಚರಿಕೆ ನೀಡಿದ್ದಾನೆ.
”ಪಂಜಾಬ್ನಿಂದ ಪ್ಯಾಲೆಸ್ತೀನ್ವರೆಗೆ ಅಕ್ರಮ ಅತಿಕ್ರಮಣದ ಅಡಿಯಲ್ಲಿರುವ ಜನರು ಪ್ರತಿಕ್ರಿಯೆ ನೀಡುತ್ತಾರೆ. ಹಿಂಸಾಚಾರವು ಹಿಂಸೆಯನ್ನೇ ಪಡೆದುಕೊಳ್ಳುತ್ತದೆ. ನಮ್ಮ ಮಾತೃಭೂಮಿ ಪಂಜಾಬ್ ಮೇಲಿನ ಅತಿಕ್ರಮಣ ಮಾಡುವ ಪ್ರವೃತ್ತಿಯನ್ನು ಭಾರತ ಮುಂದುವರಿಸಿದರೆ ಹಮಾಸ್ ದಾಳಿಯ ರೀತಿಯಲ್ಲೇ ತಕ್ಕ ಶಾಸ್ತಿ ಮಾಡಲಾಗುತ್ತದೆ. ಇದಕ್ಕೆ ಪ್ರಧಾನಿ ಮೋದಿಯೇ ಹೊಣೆ ಹೊರಬೇಕಾಗುತ್ತದೆ,” ಎಂದು ವಿಡಿಯೋದಲ್ಲಿ ಉಗ್ರ ಗುರು ಪತ್ವಂತ್ ಸಿಂಗ್ ಪನ್ನು ಬೆದರಿಸಿದ್ದಾನೆ.
”ಸಿಖ್ ಫಾರ್ ಜಸ್ಟೀಸ್ ಸಂಘಟನೆ ‘ಲಿಬರೇಷನ್ ಆಫ್ ಪಂಜಾಬ್’ ಸ್ಥಾಪನೆಗೆ ಹೋರಾಟ ಮಾಡುತ್ತಿದೆ. ಇದಕ್ಕಾಗಿ ಜನಮತಗಣನೆ ನಡೆಸುವಂತೆ ಬಹುಕಾಲದಿಂದ ಆಗ್ರಹಿಸುತ್ತಿದೆ. ‘ಮತದಾನ ಬೇಕೋ ಅಥವ ಬುಲೆಟ್ ಬೇಕೋ’ (ಬುಲೆಟ್ ಅಥವಾ ಬ್ಯಾಲೆಟ್) ಎಂಬುದನ್ನು ಭಾರತ ಸರಕಾರ ಆಯ್ಕೆ ಮಾಡಿಕೊಳ್ಳಲಿ,” ಎಂದು ವಿಡಿಯೋದಲ್ಲಿ ಪನ್ನು ಎಚ್ಚರಿಕೆ ಸಂದೇಶ ನೀಡಿದ್ದಾನೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಗುಪ್ತಚರ ಸಂಸ್ಥೆ ರಾ ಕೈವಾಡ ಇದೆ ಎಂಬ ಕೆನಡಾ ಆರೋಪದ ನಡುವೆ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹಳಸಿದೆ.