ಕೊಪ್ಪಳ: ಆಳವಾದ ಅಧ್ಯಯನ, ನಿರಂತರ ಓದು, ಶ್ರಮದಿಂದ ಕಷ್ಟಪಟ್ಟು ಓದಿ, ಇಷ್ಟಪಟ್ಟು ಅನುಭವಿಸಿ ಬರೆದರೆ ಮಾತ್ರ ಸಾಹಿತಿಗಳು ಆಗಲು ಸಾಧ್ಯ. ಕೇವಲ ಐಡೆಂಟಿಟಿ ಕಾರ್ಡ್ಗಳನ್ನ ಇಟ್ಟುಕೊಂಡವರೆಲ್ಲ ಸಾಹಿತಿಗಳಾಗಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅಭಿಪ್ರಾಯಪಟ್ಟರು.
ಕೊಪ್ಪಳದ ಕಾರಟಗಿ ಪಟ್ಟಣದಲ್ಲಿ ಭಾನುವಾರ ತಾಲೂಕು ಕಸಾಪ ಆಯೋಜಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಭಾಜನರಾಗಿರುವ ತಾಲೂಕಿನ ಕಥೆಗಾರ ಮಂಜು ನಾಯಕ ಚಳ್ಳೂರು ಅವರಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾರು ಕಷ್ಟ, ಬಡತನ ಸವಿದಿರುತ್ತಾರೋ ಅವರು ಮೇಲೆ ಬಂದು ಸಾಧನೆ ಮಾಡಲು ಸಾಧ್ಯ. ತಂದೆ-ತಾಯಿ ಮತ್ತು ಕಲಿಸಿದ ಗುರುಗಳಿಗೆ ಹೆಸರು ತರುವಂಥ ಕೆಲಸವನ್ನು ಮಾಡಬೇಕು. ಮಕ್ಕಳಿಗೆ ತಂದೆ-ತಾಯಿ ಸಂಸ್ಕಾರ, ಸಂಸ್ಕೃತಿ ಕಲಿಸಿದರೆ ಅಂಥ ಮಕ್ಕಳು ಮುಂದೆ ಹೆತ್ತವರಿಗೆ ಹೆಸರು ತರುತ್ತಾರೆ. ಸಾಧನೆ ಮಾಡಿದಾಗ ಹೆಚ್ಚು ಖುಷಿ ಪಡುವುದು ತಂದೆ-ತಾಯಿ ಮತ್ತು ಕಲಿಸಿದ ಗುರುಗಳು.
ಯಾವುದೇ ಕ್ಷೇತ್ರವಿರಲಿ ಸತತ ಶ್ರಮದ ಮೂಲಕ ಏನಾದರೂ ಸಾಧಿಸಬೇಕು. ಅಲ್ಪ ಜ್ಞಾನ ಪಡೆದು ದೊಡ್ಡದಾಗಿ ಸಾಹಿತಿಗಳೆಂದು ಬಿಂಬಿಸುವವರೇ ಹೆಚ್ಚು ಇರುವಂಥ ಈ ಕಾಲದಲ್ಲಿ ಕಷ್ಟದ ಜೀವನ ಸವಿದು, ಸಣ್ಣ ವಯಸ್ಸಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಪಾತ್ರರಾದ ನಮ್ಮ ಕ್ಷೇತ್ರದ ಚೆಳ್ಳೂರು ಗ್ರಾಮದ ಯುವಕ ಕಥೆಗಾರ ಮಂಜುನಾಥ ನಾಯಕ ಭಿನ್ನವಾಗುತ್ತಾರೆ ಎಂದು ಬಣ್ಣಿಸಿದರು.