ಡಿಪಿ ವರ್ಲ್ಡ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹೊಸ ದೀರ್ಘಾವಧಿ ಪಾಲುದಾರಿಕೆ ಒಪ್ಪಂದವನ್ನು ಘೋಷಣೆ ಮಾಡಿದೆ. ಡಿಪಿ ವರ್ಲ್ಡ್, ಈಗ 2024 ರಿಂದ ದೆಹಲಿ ಕ್ಯಾಪಿಟಲ್ಸ್‌ನ ಮಹಿಳಾ ತಂಡದ ಶೀರ್ಷಿಕೆ ಪಾಲುದಾರರಾಗಿದ್ದಾರೆ. ತಂಡದೊಂದಿಗೆ ಬಹು ವರ್ಷದ ಒಪ್ಪಂದವನ್ನು ಕಂಪನಿ ಘೋಷಣೆ ಮಾಡಿದೆ. ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಪಿ ವರ್ಲ್ಡ್ ತನ್ನ ಒಪ್ಪಂದವನ್ನು ಘೋಷಣೆ ಮಾಡಿತು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಹಾಗೂ ಅಲೀಸ್ ಕ್ಯಾಪ್ಸಿ ಕೂಡ ಹಾಜರಿದ್ದರು.
ಟೀಮ್‌ನ ಹೊಸ ಜೆರ್ಸಿ ಅನಾವರಣ ಮಾಡಿ ಮಾತನಾಡಿದ ತಂಡ ಪ್ರಮುಖ ಆಟಗಾರ್ತಿ ಜೆಮಿಮಾ ರೋಡ್ರಿಗಸ್, ಕ್ರಿಕೆಟ್ ತಮ್ಮಂತ ಆಟಗಾರ್ತಿಯರಿಗೆ ಹೇಗೆ ವರವಾಗಿ ಬಂದಿದೆ ಎನ್ನುವುದನ್ನು ವಿವರಿಸಿದರು. ಡಬ್ಲ್ಯುಪಿಎಲ್‌ನಲ್ಲಿ ತಾವು ಮಾಡುವ ಸ್ನೇಹವು ಜೀವಮಾನದ ಕೊನೆಯವರೆಗೂ ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಕ್ರಿಕೆಟ್ ಆಡುತ್ತಿರುವುದೇ ನನಗೆ ವರವಿದ್ದಂತೆ. ಇದು ಕೇವಲ ನನ್ನ ಹಾಗೂ ನನ್ನ ಆಟ ಮಾತ್ರವೇ ಅಲ್ಲ. ಅದರೊಂದಿಗೆ ತಂಡದ ಇತರರೊಂದಿಗೆ ಮಾಡುವ ಸ್ನೇಹ ಅವರ ಸಂವಾದವೂ ಸೇರಿದೆ. ಇದು ಲೈಫ್‌ಟೈಮ್ ಪೂರ್ತಿ ಇರಬೇಕು. ನಮ್ಮ ಸಂಸ್ಕೃತಿಗಿಂತ ಬಹಳ ಭಿನ್ನವಾದ ಜನರನ್ನು ಇಲ್ಲಿ ಭೇಟಿ ಮಾಡುತ್ತೇವೆ. ಅವರ ಸಂಸ್ಕೃತಿ ನಮ್ಮ ಅರಿವಿಗೆ ಬರುತ್ತದೆ. ಇದಕ್ಕಿಂತ ಹೆಚ್ಚಿನದನ್ನು ನಾನು ನಿರೀಕ್ಷೆ ಮಾಡಿಲ್ಲ’ ಎಂದು ಜೆಮಿಮಾ ಹೇಳಿದ್ದಾರೆ.
ಇಂಗ್ಲೆಂಡ್ ತಂಡದ ಆಟಗಾರ್ತಿಯಾಗಿರುವ ಅಲೀಸ್ ಕ್ಯಾಪ್ಸಿ, ಡೆಲ್ಲಿ ಕ್ಯಾಪಿಟಲ್ಸ್ ತಂಡ ತಮ್ಮನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಖುಷಿಯಾಗಿದೆ ಎಂದರು. ಈ ಫ್ರಾಂಚೈಸಿ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಭಾರತದ ಕ್ರಿಕೆಟ್ ಪ್ರೀತಿ ಏನು ಅನ್ನೋದು ಎಲ್ಲರಿಗೂ ಗೊತ್ತಿದೆ. ಬೇರೆ ದೇಶದ ಪ್ರಜೆಯಾಗಿದ್ದರೂ, ಕ್ರಿಕೆಟ್ ವಿಚಾರದಲ್ಲಿ ಭಾರತದೊಂದಿಗೆ ನಾನು ಕನೆಕ್ಟ್ ಆಗಿಯೇ ಇರುತ್ತೇನೆ ಎಂದು ಹೇಳಿದ್ದಾರೆ. ವಿದೇಶ ಆಟಗಾರ್ತಿ ಏನು ಕನಸು ಕಾಣುತ್ತಾರೋ ಅದು ನನಗೆ ನನಸಾಗಿದೆ. ಇಷ್ಟು ದೊಡ್ಡ ಪ್ರಮಾಣದ ಜನರ ನಡುವೆ ಆಡುವುದು ಹಾಗೂ ಈ ಫ್ರಾಂಚೈಸಿಯ ಭಾಗವಾಗಿರುವುದು ಬಹಳ ವಿಶೇಷ ಅನುಭವ ಎಂದಿದ್ದಾರೆ.