ನವದೆಹಲಿ: ಮಹಿಳೆಯೊಬ್ಬಳು ವಿದ್ಯುತ್ ಶಾಕ್’ನಿಂದ ಮೃತಪಟ್ಟ ಘಟನೆ ದೆಹಲಿಯ ರೈಲ್ವೇ ನಿಲ್ದಾಣದಲ್ಲಿ ಭಾನುವಾರ ಮುಂಜಾನೆ ನಡೆದಿದೆ. ಮೃತ ಮಹಿಳೆಯನ್ನು ಪೂರ್ವ ದೆಹಲಿಯ ಪ್ರೀತ್ ವಿಹಾರ್ ನಿವಾಸಿ ಸಾಕ್ಷಿ ಅಹುಜಾ ಎಂದು ತಿಳಿದು ಬಂದಿದೆ.
ಬೆಳಿಗ್ಗೆ 5:30 ರ ಸುಮಾರಿಗೆ ಇಬ್ಬರು ಮಹಿಳೆಯರು, ಮೂವರು ಮಕ್ಕಳೊಂದಿಗೆ ರೈಲು ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.
ವಿದ್ಯುತ್ ಶಾಕ್‍ನಿಂದ ಕುಸಿದುಬಿದ್ದಿದ್ದ ಮಹಿಳೆಯನ್ನು ಅಲ್ಲಿದ್ದ ಜನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದಾರಿಯಲ್ಲಿ ನೀರು ನಿಂತಿತ್ತು. ಈ ವೇಳೆ ನೀರಿನ ಪಕ್ಕದಲ್ಲಿ ಸರಿದು ಹೋಗುವಾಗ ವಿದ್ಯುತ್ ಕಂಬಕ್ಕೆ ಕೈ ತಾಕಿದೆ. ಈ ವೇಳೆ ಮಹಿಳೆಗೆ ವಿದ್ಯುತ್ ಪ್ರವಹಿಸಿದೆ (Electrocution) ಎಂದು ತಿಳಿದು ಬಂದಿದೆ. ಕಂಬದ ಕೆಳಭಾಗದಲ್ಲಿ ವಿದ್ಯುತ್ ತಂತಿಗಳು ಇವೆ. ಈ ತಂತಿಗಳ ಮೂಲಕ ವಿದ್ಯುತ್ ಹರಿದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.