ಚಿತ್ರದುರ್ಗ: ನಾನು ರಾಜಕೀಯದಲ್ಲಿ ಹಂಗಾಗಬೇಕು, ಹಿಂಗಾಗಬೇಕು ಅಂತ ಬಂದಿಲ್ಲ, ಬಂದಿನಿನಿ ಸೇವೆ ಮಾಡ್ತೀದೀನಿ ಅಷ್ಟೇ.ನಿಮಗೆ ಇಷ್ಟ ಇದ್ರೆ ಮುಂದಿನ ಬಾರಿ ಗೆಲ್ಸಿ, ಇಲ್ಲದಿದ್ರೆ ಬಿಡಿ ಎಂದು ಶಾಸಕ ವೀರೇಂದ್ರ ಪಪ್ಪಿ ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿನ ಕಾವಾಡಿಗರ ಹಟ್ಟಿಯಲ್ಲಿ ನೀರಿನ ಸಮಸ್ಯೆ ಕುರಿತು ಮಹಿಳೆಯರು ರಸ್ತೆ ತಡೆ ನಡಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಶಾಸಕ ಗರಂ ಆಗಿದ್ದಾರೆ.
‘ಹೆಂಡ್ತಿ ಮಕ್ಕಳನ್ನ ಬಿಟ್ಟು ಸೇವೆ ಮಾಡಿ ಅಂದ್ರೆ ಹೆಂಗೆ? ಅಂಥ ದೊಡ್ಡ ಗುಣಾನೂ ನಂದಲ್ಲ, ನಾನದನ್ನು ಮಾಡುವುದೂ ಇಲ್ಲ, ನನಗದು ಬೇಕಾಗಿಲ್ಲ ಎಂದಿದ್ದಾರೆ. ನಾನು ಹಂಗಾಗಬೇಕು, ಹಿಂಗಾಗಬೇಕು ಅಂತ ರಾಜಕೀಯಕ್ಕೆ ಬಂದಿಲ್ಲ. ನಿಮಗೆ ಇಷ್ಟ ಇದ್ರೆ ಮುಂದಿನ ಬಾರಿ ಗೆಲ್ಸಿ. ಇಲ್ಲ ಅಂದ್ರೆ ಬಿಡಿ. ನನಗೆ ಮತ ಹಾಕಿ ಗೆಲ್ಲಿಸಿ ಅಂತಾನೂ ಕೇಳೋದಿಲ್ಲ’ ಎಂದಿದ್ದಾರೆ.
ನನಗೆ ನಿಮ್ಮಿಂದ ಆಗಬೇಕಾಗಿದ್ದು ಏನೂ ಇಲ್ಲ. ನೀವು ಮಾತನಾಡಬೇಕಾದ್ರೆ ಬಹಳ ಯೋಚನೆ ಮಾಡಿ ಮಾತಾಡ್ಬೇಕು. ನನ್ನಿಂದ ನಿಮಗೆ ತೊಂದರೆಯಾಗಿದ್ರೆ ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತಿದ್ದೆ ಎಂದು ಕುಟುಂಬ ವಿಷಯ ಕೆದಕಿದ ಮಹಿಳೆಯರ ವಿರುದ್ಧ ಆಕ್ರೋಶ ಹೊರಹಾಕಿದರು. ಸಮಸ್ಯೆ ಆಲಿಸುತ್ತಿದ್ದ ಶಾಸಕರು, ಪತ್ನಿ ಆಸ್ಪತ್ರೆಯಲ್ಲಿದ್ದಾರೆ ನೀವು ಬೇಗ ಬಿಟ್ಟರೆ ನಾನು ಹೋಗಿ ನೋಡುತ್ತೇನೆ ಎಂದರು. ಆದರೆ ಮಹಿಳೆಯೊಬ್ಬರು ನೀವು ಹೆಂಡ್ತಿ ನೋಡಲು ಹೋಗಬೇಕು ಎನ್ನುತ್ತಿದ್ದೀರಿ ನಾವು 4 ತಿಂಗಳಿಂದ ಯಾರು ಸತ್ತರೂ ನೋಡಲು ಹೋಗಿಲ್ಲ ಎಂದರು. ಈ ವೇಳೆ ಶಾಸಕರು ಗರಂ ಆದರು.