ಮುಂಬೈ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪ್ರತಿನಿತ್ಯ ರಾಜಕೀಯ ಬೆಳವಣಿಗೆಗಳು ನಡೆಯುತ್ತಲೇ ಇವೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಮಂತ್ರಿ ಮನೀಶ್ ತಿವಾರಿ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳು ಈಗಾಗಲೇ ಹಬ್ಬಿವೆ. ಈ ಪಟ್ಟಿಗೆ ಇದೀಗ ರಾಜ್ ಠಾಕ್ರೆ (Raj Thackeray) ಕೂಡ ಸೇರಿದ್ದಾರೆ.
ಹೌದು. ಸದ್ಯ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಅಧ್ಯಕ್ಷ ರಾಜ್ ಠಾಕ್ರೆ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹವೊಂದು ಕೇಳಿಬಂದಿದೆ. ಇದಕ್ಕೆ ಮುಖ್ಯ ಕಾರಣ ಇಂದು ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್ ಅವರು ರಾಜ್ ಠಾಕ್ರೆಯವರನ್ನು ಭೇಟಿಯಾಗಿದ್ದಾಗಿದೆ. ರಾಜ್ ಠಾಕ್ರೆಯನ್ನು ಭೇಟಿಯಾಗಿರುವ ಶೆಲಾರ್ (Ashish Shelar), ಎನ್ಡಿಎ ಜೊತೆ ಕೈಜೋಡಿಸುವಂತೆ ಕೇಳಿಕೊಂಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಸಮಾವೇಶದಲ್ಲಿ ಚರ್ಚೆಯ ಬಳಿಕ ಈ ಬೆಳವಣಿಗೆ ನಡೆದಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ರಾಜ್ ಠಾಕ್ರೆಯವರು ಕೂಡ ಬಿಜೆಪಿಯಂತೆಯೇ ಹಿಂದುತ್ವ ಸಿದ್ಧಾಂತವನ್ನು ನಂಬಿರುವುದರಿಂದ ನ್ಯಾಷನಲ್ ಡೆಮೆಕ್ರಾಟಿಕ್ ಅಲೈಯೆನ್ಸ್ (NDA) ಒಕ್ಕೂಟದ ಕಡೆ ಒಲವು ತೋರಿದ್ದಾರೆ. ಚುನಾವಣೆಯಲ್ಲಿ7 ರಿಂದ 8% ರಷ್ಟು ಮತಗಳನ್ನು ಗಳಿಸುವ ಮೂಲಕ ಠಾಕ್ರೆಯವರ ಪಕ್ಷವು ಮುಂಬೈನಲ್ಲಿ ಹಿಡಿತ ಸಾಧಿಸಿದೆ. ಆದ್ದರಿಂದ ಎನ್ಡಿಎ,
ರಾಜ್ ಠಾಕ್ರೆಯವರನ್ನು ಕರೆತರುವಲ್ಲಿ ಯಶಸ್ವಿಯಾದರೆ ಬಿಜೆಪಿಗೆ ಸಹಾಯ ಮಾಡುತ್ತದೆ ಎಂಬ ಲೆಕ್ಕಾಚಾರವಿದೆ. ಇತ್ತ ಬಿಜೆಪಿ (BJP) ಮತ್ತು ಎಂಎನ್ಎಸ್ ಎರಡೂ ಪಕ್ಷದ ನಾಯಕರು ಮೈತ್ರಿ ಬಗ್ಗೆ ಬಹಿರಂಗವಾಗಿ ಮಾತನಾಡದೆ ಸಮಯ ಬಂದಾಗ ಎಲ್ಲವೂ ನಡೆಯುತ್ತದೆ ಎಂಬ ಹೇಳಿಕೆಗಳನ್ನು ನೀಡಿದ್ದಾರೆ. ಇಂದು ರಾಜ್ ಠಾಕ್ರೆ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಸಮಯ ಬಂದಾಗ ಎಲ್ಲವನ್ನೂ ತಿಳಿಸಲಾಗುವುದು ಎಂದು ಆಶಿಶ್ ಶೆಲಾರ್ ಹೇಳಿದ್ದಾರೆ.