ದೆಹಲಿ: ಡೇವಿಡ್ ವಾರ್ನರ್ ಇಂಗ್ಲೆಂಡ್ ವಿರುದ್ಧ ಆಷಸ್ ಟೆಸ್ಟ್ ಸರಣಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಉಸ್ಮಾನ್ ಖವಾಜ ಅವರ ಜತೆ ಇನಿಂಗ್ಸ್ ಆರಂಭಿಸಿದ್ದರು. ಆದರೆ, ಇವರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿ ಬಂದಿಲ್ಲ. ಮೂರು ಪಂದ್ಯಗಳಿಂದ ವಾರ್ನರ್ 23.50ರ ಸರಾಸರಿಯಲ್ಲಿ ಕೇವಲ 141 ರನ್ಗಳಿಗೆ ಸೀಮಿತರಾಗಿದ್ದಾರೆ.
ಇದರಲ್ಲಿ ಅವರು ಸಿಡಿಸಿದ್ದು ಒಂದೇ ಒಂದು ಅರ್ಧಶತಕ ಮಾತ್ರ.
ಪ್ರಸ್ತುತ ನಡೆಯುತ್ತಿರುವ ಆಷಸ್ ಟೆಸ್ಟ್ ಸರಣಿ ಮುಗಿದ ಬಳಿಕ ಆಸ್ಟ್ರೇಲಿಯಾ ಸ್ಟಾರ್ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಟೆಸ್ಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಬಹುದು ಎಂಬ ಅನುಮಾನ ಶುರುವಾಗಿದೆ. ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅನುಮಾನಾಸ್ಪದ ಪೋಸ್ಟ್ನಿಂದ ಈ ಬಗ್ಗೆ ಬೆಳಕು ಚೆಲ್ಲಿದೆ.
ಭಾನುವಾರ ಅಂತ್ಯವಾದ ಹೆಡಿಂಗ್ಲೆ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ ಡೇವಿಡ್ ವಾರ್ನರ್ ಅವರು ಸ್ಟುವರ್ಟ್ ಬ್ರಾಡ್ಗೆ ವಿಕೆಟ್ ಒಪ್ಪಿಸಿದ್ದರು. ಅಂದ ಹಾಗೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 3 ವಿಕೆಟ್ಗಳಿಂದ ಸೋಲು ಅನುಭವಿಸಿತು. ಇದರ ಹೊರತಾಗಿಯೂ ಆರಂಭಿಕ ಎರಡು ಪಂಂದ್ಯಗಳ ಗೆಲುವಿನ ಆಧಾರದ ಮೇಲೆ ಆಸ್ಟ್ರೇಲಿಯಾ ತಂಡ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಕಾಯ್ದುಕೊಂಡಿದೆ
ಅಂದ ಹಾಗೆ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸೋಲು ಅನುಭವಿಸಿದ ಬಳಿಕ ಡೇವಿಡ್ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಅವರು, ತಮ್ಮ ಕುಟುಂಬದ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ “ಟೆಸ್ಟ್ ಕ್ರಿಕೆಟ್ ಜತೆ ಪ್ರವಾಸ ಮಾಡುವ ನಮ್ಮ ಒಂದು ದಶಕ ಅಂತ್ಯವಾಗಿದೆ. ಇದು ಮೋಜಿನಿಂದ ಕೂಡಿತ್ತು. ನಿಮ್ಮ ಹಾಗೂ ನಿಮ್ಮ ಹುಡುಗಿಯರ ಗುಂಪಿನಿಂದ ದೊಡ್ಡ ಬೆಂಬಲವಿದೆ. ನಿಮ್ಮನ್ನು ಪ್ರೀತಿಸುತ್ತೇನೆ ಡೇವಿಡ್ ವಾರ್ನರ್,” ಎಂದು ಶೀರ್ಷಿಕೆ ಬರೆದಿದ್ದಾರೆ.
ಆಸಷ್ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಸದ್ಯದಲ್ಲೇ ತಂಡವನ್ನು ಪ್ರಕಟಿಸಲಿದೆ. ಆದರೆ, ಲಯ ಕಳೆದುಕೊಂಡಿರುವ ಡೇವಿಡ್ ವಾರ್ನರ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಅನುಮಾನ. ಮೂರನೇ ಟೆಸ್ಟ್ ಪಂದ್ಯದ ಬಳಿಕ ಪ್ಯಾಟ್ ಕಮಿನ್ಸ್ ಅವರು ತಂಡದಲ್ಲಿ ಡೇವಿಡ್ ವಾರ್ನರ್ ಸ್ಥಾನವನ್ನು ಖಾತರಿಪಡಿಸಲು ನಿರಾಕರಿಸಿದ್ದರು. ಅಂದಹಾಗೆ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯಕ್ಕೆ ಕ್ಯಾಮೆರಾನ್ ಗ್ರೀನ್ ಅವರ ಮರಳುವಿಕೆಯ ಬಗ್ಗೆ ಸುಳಿವು ನೀಡಿದ್ದರು.