ವಿಜಯಪುರ: ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ (BJP JDS Alliance) ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಜೆಡಿಎಸ್ ಅನ್ನು ಟೀಕಿಸುತ್ತಿದ್ದರೆ, ಇತ್ತ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ (H.Vishwanath) ಅವರು, ಜೆಡಿಎಸ್ ಜೊತೆಗಿನ ಮೈತ್ರಿ ಬಿಜೆಪಿಗೆ ನಷ್ಟವಾಗಲಿದೆ, ಕಾಂಗ್ರೆಸ್ಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.
ಜೆಡಿಎಸ್ ಯಾರ ಜೊತೆಗೆ ಸೇರಿದರೂ ಅವರಿಗೆ ಲಾಸ್ ಆಗತ್ತದೆ. ಮೈತ್ರಿಯಿಂದ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆ, ಬಿಜೆಪಿಗೆ ಲಾಸ್ ಆಗಲಿದೆ ಎಂದು ವಿಶ್ವನಾಥ್ ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸುಮ್ಮನೆ ಜಾತ್ಯತೀತ ಪಕ್ಷ ಅಂತ ಇಟ್ಟುಕೊಂಡಿದೆ ಎಂದು ಹೇಳಿದರು.
ಜೆಡಿಎಸ್ನಲ್ಲಿ ಕುಟುಂಬ ರಾಜಕಾರಣವಿದೆ ಎಂಬುದರ ಬಗ್ಗೆ ಮಾತನಾಡಿದ ವಿಶ್ವನಾಥ್, ಈಗಲೂ ಮನೆಯವರಿಗಾಗಿಯೇ ಸೀಟ್ ಹಂಚಿಕೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಹಿಂದೆ ದಲಿತ-ಮುಸ್ಲಿಂ ಎರಡು ಟಿಕೇಟ್ ಕೇಳಿದಾಗ ಕೊಡಲಿಲ್ಲ. ಆಗ ಗೆಜ್ಜೆ ಪೂಜೆ, ಈಗ ರಿಯಲ್ ನಾಟಕ ಶುರು ಮಾಡಿದ್ದಾರೆ. ಈಗಲೂ ಬಿಜೆಪಿ ಹೈಕಮಾಂಡ್ ಬಳಿ ತಮ್ಮ ಮನೆಯವರಿಗೆ ಸೀಟ್ ಕೇಳುತ್ತಿತ್ತಿದ್ದಾರೆ ಎಂದರು.