ಶಿವಮೊಗ್ಗ: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಕಾರ್ಯಕರ್ತರು ಅಲ್ಲಲ್ಲಿ ಚರ್ಚೆ ಮಾಡುತ್ತಿದ್ದಾರೆ. ಆದರೆ ಪಕ್ಷದ ಹಿರಿಯ ನಾಯಕರಿಗೆ ಈ ಬಗ್ಗೆ ಗೊತ್ತಿರುತ್ತದೆ. ಈ ಬಗ್ಗೆ ನಾನು ಬಹಿರಂಗವಾಗಿ ಚರ್ಚೆ ಮಾಡಲಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಶಿಕಾರಿಪುರ ಶಾಸಕ ಬಿವೈ ವಿಜಯೇಂದ್ರ ಹೇಳಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಕುರಿತಾಗಿ ನಗರದಲ್ಲಿ ಸುದ್ದಿಗಾರರ ಪ್ರಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ನಾಯಕತ್ವ ವಿಚಾರ ಬಂದಾಗ ಪಕ್ಷದ ವರಿಷ್ಠರು ಕೂತು ತೀರ್ಮಾನ ತೆಗೆದುಕೊಳ್ಳುತ್ತಾರೆ. ನನಗೆ ಶಿಕಾರಿಪುರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದ್ದರು. ಅದರಂತೆ ಗೆದ್ದು ಶಾಸಕನಾಗಿದ್ದೇನೆ ಎಂದು ಹೇಳಿದರು. ಯಾರಿಗೆ ಜವಾಬ್ದಾರಿ ನೀಡಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತೆ? ಸಂಘಟನೆಗೆ ಹೆಚ್ಚು ಶಕ್ತಿ ಸಿಗುತ್ತೆ ಎಂಬ ಪಕ್ಷದ ನಾಯಕರಿಗೆ ತಿಳಿದಿದೆ. ಇದರ ಬಗ್ಗೆ ಹಿರಿಯರೇ ಕೂತು ಚರ್ಚೆ ಮಾಡಬೇಕು.
ನಾನು ಈ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲು ಹೋಗುವುದಿಲ್ಲ ಎಂದರು. ನನ್ನ ತಂದೆ ಬಿಎಸ್ ಯಡಿಯೂರಪ್ಪ ಪುನಃ ಮುನ್ನೆಲೆಗೆ ಬರುತ್ತಿರುವುದು ವಿಶೇಷವೇನಲ್ಲ. ಯಡಿಯೂರಪ್ಪ ಹಾಗೂ ಅನೇಕ ಹಿರಿಯ ನಾಯಕರು ಈ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಸಹಜವಾಗಿ ಚುನಾವಣೆ ಬಂದ ಸಂದರ್ಭದಲ್ಲಿ ಕಾರ್ಯಕರ್ತರನ್ನ ಸಜ್ಜು ಮಾಡಬೇಕು. ವಿಶ್ವಾಸ ತುಂಬಬೇಕು ಎಂದು ಯಡಿಯೂರಪ್ಪ ನೇತೃತ್ವ ವಹಿಸಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಲೋಕಸಭಾ ಮೈತ್ರಿ ಬಗ್ಗೆ ದೆಹಲಿ ಮಟ್ಟದಲ್ಲಿ ಏನು ಚರ್ಚೆಯಾಗಿದೆ ಎಂದು ನಮಗೆ ಗೊತ್ತಿಲ್ಲ. ಅಂತಿಮ ತೀರ್ಮಾನವಾದ ಬಳಿಕ ಮಾಹಿತಿ ಸಿಗಲಿದೆ ಎಂದರು.