ಬೆಂಗಳೂರು;- ಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ನಿಕ್ಕಿಯಾಗಿದೆ. ಈಗ ಏನಿದ್ದರೂ ಸೀಟು ಹಂಚಿಕೆ ಕಸರತ್ತು ನಡೆಯಬೇಕಿದೆ. ಆದರೆ, ಈ ಮೈತ್ರಿಯಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬ ಲೆಕ್ಕಾಚಾರ ಎರಡೂ ಕಡೆಯಲ್ಲೂ ನಡೆಯುತ್ತಿವೆ.
ದಿನೇದಿನೆ ಲೋಕಸಭೆ ಚುನಾವಣೆ ಕಾವು ಏರುತ್ತಿದ್ದು, ಈ ವಾರ ಜೆಡಿಎಸ್ ಸೀಟು ಹಂಚಿಕೆ ಅಂತಿಮಗೊಳ್ಳಲಿದೆ. ತನ್ನ ಪ್ರಾಬಲ್ಯವಿರುವ ಹಾಸನ, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಈ ಐದು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನು ಬಿಜೆಪಿ ಬಿಟ್ಟುಕೊಡುವ ಸಾಧ್ಯತೆಯಿದೆ. ಈ ಮೈತ್ರಿಯಿಂದ ಜೆಡಿಎಸ್ಗೆ ಹೆಚ್ಚು ಲಾಭ ಎಂಬ ಮಾತು ಒಂದೆಡೆ ಕೇಳಿ ಬಂದರೆ, ಬಿಜೆಪಿಗೆ ಭರಪೂರ ಲಾಭವಾಗಲಿದೆ ಎಂಬ ವಾದವೂ ಇದೆ. ಹಾಸನ ಕ್ಷೇತ್ರಕ್ಕೆ ಸೀಮಿತವಾಗಿದ್ದ ಜೆಡಿಎಸ್, ಬಿಜೆಪಿ ಬೆಂಬಲದಿಂದ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಬಹುದು ಎಂಬುದು ಒಂದು ಲೆಕ್ಕ.
ಆದರೆ ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಯಚೂರು, ಕಲಬುರಗಿ, ಬೀದರ್, ವಿಜಯಪುರ, ಮೈಸೂರು, ಚಾಮರಾಜನಗರ, ಬಳ್ಳಾರಿಯಲ್ಲಿ ಬಿಜೆಪಿಗೆ ಜೆಡಿಎಸ್ ಬಲ ಸಿಗಲಿದೆ ಎಂಬ ಅಂಶವನ್ನು ಗಮನದಲ್ಲಿಟ್ಟು ಬಿಜೆಪಿ ಮೈತ್ರಿ ಮಾಡಿಕೊಂಡಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. 2023ರ ವಿಧಾನಸಭೆ ಚುನಾವಣೆಯ ಮತಗಳಿಕೆ ಪ್ರಮಾಣವನ್ನು ಆಧರಿಸಿಯೇ ಬಿಜೆಪಿ ಹೈಕಮಾಂಡ್ ಜೆಡಿಎಸ್ ಜತೆ ಮೈತ್ರಿಗೆ ಮುದ್ರೆ ಒತ್ತಿದೆ ಎಂದು ಹೇಳಲಾಗುತ್ತಿದೆ