ಬೆಂಗಳೂರು: ಬಿಜೆಪಿಯಿಂದ (BJP) ಯಾರೇ ಶಾಸಕರು ಕಾಂಗ್ರೆಸ್‍ಗೆ (Congress) ಬಂದರೂ ನಾವು ವಿರೋಧ ಮಾಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G.Parameshwar) ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪರೋಕ್ಷ ಸುಳಿವು ಕೊಟ್ಟಿದ್ದಾರೆ. ಸೋಮಶೇಖರ್ ಅವರನ್ನು ನಾನು ಸಂಪರ್ಕ ಮಾಡಿಲ್ಲ. ಆದರೆ ಅವರು ಕಾಂಗ್ರೆಸ್‍ಗೆ ದುಡಿದವರು. ನಾನು ಕಾಂಗ್ರೆಸ್ ಅಧ್ಯಕ್ಷ ಆಗಿದ್ದಾಗ ಅವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡಿದ್ದೆ. ಆಗ ಒಳ್ಳೆಯ ಕೆಲಸ ಮಾಡಿದ್ದರು. ಅವರು ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇನೆ ಎಂದಿದ್ದಾರೆ.
ಅವರನ್ನು ಕಾಂಗ್ರೆಸ್ ಪಕ್ಷವೂ ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿತ್ತು. 3 ಬಾರಿ ಕಾಂಗ್ರೆಸ್‍ನಿಂದ ಶಾಸಕರಾಗಿದ್ದರು. ಅವರು ನಮ್ಮಲ್ಲಿ ಇದ್ದಿದ್ದರೆ ಸಚಿವ ಸ್ಥಾನ ಸಿಗಬಹುದಿತ್ತೇನೋ? ಈಗ ಇರುವ ಪಕ್ಷದಲ್ಲಿ ಬೇಸರ ಆಗಿದೆ ಎನ್ನುವ ಮಾತುಗಳನ್ನು ಅನೇಕ ಬಾರಿ ಹೇಳಿದ್ದಾರೆ. ಪಕ್ಷಕ್ಕೆ ವಾಪಸ್ ಬರುವುದಾಗಿ ನಮ್ಮ ಅಧ್ಯಕ್ಷರ ಜೊತೆ ಸಂಪರ್ಕ ಮಾಡಿದರೆ ನಾವೆಲ್ಲ ಒಪ್ಪುತ್ತೇವೆ. ಅವರು ಪಕ್ಷಕ್ಕೆ ವಾಪಸ್ ಆಗುವುದನ್ನು ವಿರೋಧ ಮಾಡುವುದಿಲ್ಲ ಎಂದಿದ್ದಾರೆ.
ಬಿಜೆಪಿ ಬಿಟ್ಟು ಬರುವವರಿಗೆ ಕಾಂಗ್ರೆಸ್‍ನಲ್ಲಿ ಸ್ಥಾನಮಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರೇನು ಸ್ಥಾನಮಾನ ನೋಡಿ ಬರುತ್ತೇವೆ ಎಂದು ಹೇಳಿಲ್ಲ. ನಮ್ಮ ಸಿದ್ದಾಂತದ ಮೇಲೆ, ಪಕ್ಷದ ನಾಯಕತ್ವದ ಮೇಲೆ ವಿಶ್ವಾಸ ಇಟ್ಟು ಬರುತ್ತಾರೆ. ಆಗ ಒಳ್ಳೆಯ ಕೆಲಸ ಮಾಡಿದರೆ ಅವರಿಗೆ ಅವಕಾಶ ಸಿಗುತ್ತದೆ. ನಮ್ಮ ಪಕ್ಷದಲ್ಲಿ ಯಾರಿಗೂ ಭೇದ ಭಾವ ಮಾಡುವುದಿಲ್ಲ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಸ್ಥಾನ ಸಿಗುತ್ತದೆ. ಪಕ್ಷ ಬಿಟ್ಟು ಬರುವವರಿಗೆ ಸ್ಥಾನಮಾನ ನೀಡಲು ರಾಜಕೀಯದಲ್ಲಿ ಸಾಧ್ಯವಿದೆ ಎಂದಿದ್ದಾರೆ.