ನವದೆಹಲಿ: ಈಸ್ಟ್ ಇಂಡಿಯಾ ಕಂಪನಿ, ಪಿಎಫ್ಐ, ಇಂಡಿಯನ್ ಮುಜಾಹಿದೀನ್ನಲ್ಲೂ ಭಾರತ ಎನ್ನುವ ಪದವಿದೆ. ಭಾರತ ಎಂದು ಹೆಸರಿದ್ದ ಮಾತ್ರಕ್ಕೆ ಅದು ಭಾರತವಾಗುವುದಿಲ್ಲ ಎಂದು ವಿಪಕ್ಷಗಳ I.N.D.I.A ಒಕ್ಕೂಟಕ್ಕೆ ಟಾಂಗ್ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
ಮಿಸ್ಟರ್ ಮೋದಿ ಅವರೇ, ನಿಮಗೆ ಹೇಗೆ ಬೇಕೋ ಹಾಗೆ ನಮ್ಮನ್ನು ಕರೆಯಿರಿ. ನಾವು INDIA. ಮಣಿಪುರ ಸಂಘರ್ಷ ಸರಿಪಡಿಸಲು ಮತ್ತು ಪ್ರತಿ ಮಹಿಳೆ, ಮಗುವಿನ ಕಣ್ಣೀರು ಒರೆಸಲು ಸಹಾಯ ಮಾಡುತ್ತೇವೆ. ಎಲ್ಲ ಜನರಿಗೆ ಪ್ರೀತಿ ಮತ್ತು ಶಾಂತಿಯನ್ನು ಮರಳಿ ತರುತ್ತೇವೆ. ನಾವು ಮಣಿಪುರದಲ್ಲಿ ಭಾರತದ ಕಲ್ಪನೆಯನ್ನು ಮರುನಿರ್ಮಾಣ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಗುರುವಾರದಿಂದ ಆರಂಭಗೊಂಡಿದ್ದು, ಪ್ರತಿಪಕ್ಷಗಳು ಮಣಿಪುರದ ಬಗ್ಗೆ ವಿಸ್ತೃತ ಚರ್ಚೆಗೆ ಒತ್ತಾಯಿಸಿವೆ. ಮಣಿಪುರ ಸಂಘರ್ಷ ವಿಚಾರವಾಗಿ ಸದನದಲ್ಲಿ ಗದ್ದಲ ಉಂಟಾಗಿದೆ. ಈ ವಿಷಯದ ಬಗ್ಗೆ ಪ್ರಧಾನಿ ಸಂಸತ್ತಿನಲ್ಲಿ ಮಾತನಾಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.