ಬೆಂಗಳೂರು : ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ CWMA ಆದೇಶಕ್ಕೆ ನಾವು ಸುಪ್ರೀಂಕೋರ್ಟ್ ಮುಂದೆ ತಡೆಯಾಜ್ಞೆಗೆ ಮನವಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ದೆಹಲಿಯಲ್ಲಿ ನಡೆಸಿದ ಸರ್ವ ಪಕ್ಷ ಸಭೆ ನಾಯಕರು, ಕೇಂದ್ರ ಸಚಿವರು ಮತ್ತು ಲೋಕಸಭೆ, ರಾಜ್ಯಸಭೆ ಸದಸ್ಯರ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಂಕಷ್ಟ ಸೂತ್ರ ಇಲ್ಲದಿರುವುದು ಸಮಸ್ಯೆ, ಸಂಕಷ್ಟ ಹೆಚ್ಚಲು ಕಾರಣವಾಗಿದೆ. ಕೇಂದ್ರ ಜಲ ಸಂಪನ್ಮೂಲ ಸಚಿವರ ಜತೆ ಸಂಜೆ ಸಭೆ ನಡೆಸುತ್ತಿದ್ದೇವೆ. ಎರಡೂ ರಾಜ್ಯದವರನ್ನು ಕರೆದು ಅಹವಾಲು ಕೇಳುವ ಅಧಿಕಾರ ವ್ಯಾಪ್ತಿ ಪ್ತಧಾನಿಯವರಿಗೆ ಇದೆ. ಹೀಗಾಗಿ ನಾವು ಪ್ರಧಾನಿ ಅವರ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದೇವೆ. ಸಂಜೆ ಕೇಂದ್ರ ಜಲ ಸಂಪನ್ಮೂಲ ಸಚಿವರ ಸಭೆ ಬಳಿಕ ಮುಂದಿನ ತೀರ್ಮಾನ ಎಂದರು.