ಬೆಂಗಳೂರು: ಕಾನೂನನ್ನ ಕೈಗೆತ್ತಿಕೊಳ್ಳುವುದಕ್ಕೆ ನಾವು ಬಿಡುವುದಿಲ್ಲ. ಎಲ್ಲದಕ್ಕೂ ಇತಿ ಮಿತಿ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕರವೇ ಪ್ರತಿಭಟನೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಪರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಸಾರ್ವಜನಿಕರ ಆಸ್ತಿ-ಪಾಸ್ತಿಗಳನ್ನ ಹಾಳು ಮಾಡೋದು ತಪ್ಪು. ಯಾರ ಆಸ್ತಿನೂ ನಾಶ ಮಾಡಬಾರದು ಎಂದು ಹೇಳಿದರು.
ನಾವು ಕನ್ನಡಿಗರೇ ಪ್ರತಿಭಟನೆ ಮಾಡಿ ಅಂತ ನಾನೇ ಹೇಳ್ತೀನಿ. ಪ್ರಜಾಪ್ರಭುತ್ವದಲ್ಲಿ ಅವರು ಏನು ಬೇಕಾದರೂ ಮಾಡಲಿ. ಬೇರೆ ಕಡೆಯಿಂದ ಬಂದು ಇಲ್ಲಿ ಬದುಕುತ್ತಿದ್ದಾರೆ. ಅವರಿಗೆ ತಿಳಿ ಹೇಳೋಣ, ಆದರೆ ಅವರನ್ನ ಬೆದರಿಸಿ ಮಾಡುವುದಲ್ಲ ಎಂದು ಡಿಕೆಶಿ ತಿಳಿಸಿದರು. ನಾರಾಯಣ ಗೌಡ ಅವರು ಬೇಕಿದ್ದರೆ ಬಂದು ನನ್ನ ಮನೆ ಮುಂದೆ ಪ್ರತಿಭಟನೆ ಮಾಡಲಿ. ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು. ಸಿಎಂ ಕೂಡ ಸಚಿವರಿಗೆ ಕನ್ನಡದಲ್ಲಿಯೇ ಟಿಪ್ಪಣಿ ಬರಿಯೋದಕ್ಕೆ ಹೇಳಿದ್ದಾರೆ. ನಾವು ಕನ್ನಡಿಗರೇ, ಅವರ ಬೇಡಿಕೆ ಅನುಷ್ಠಾನಕ್ಕೆ ತರಲು ಸಮಯ ಬೇಕು ಎಂದರು.