ವೆಸ್ಟ್ ಇಂಡೀಸ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರ ಟೆಸ್ಟ್ ದಾಖಲೆಯೊಂದನ್ನು ಮುರಿದಿದ್ದಾರೆ.
ವೀರೇಂದ್ರ ಸೆಹ್ವಾಗ್ ಅವರನ್ನು ಹಿಂದಿಕ್ಕಲು ವಿರಾಟ್ ಕೊಹ್ಲಿಗೆ ಕೇವಲ32 ರನ್‌ಗಳ ಅಗತ್ಯವಿತ್ತು.
ಅದರಂತೆ ಮೊದಲನೇ ದಿನ ಅರ್ಧಶತಕ ಸಿಡಿಸಿದ ಕಿಂಗ್ ಕೊಹ್ಲಿ, ಸೆಹ್ವಾಗ್ (8,586 ರನ್) ಹಾಗೂ ಆಸ್ಟ್ರೇಲಿಯಾದ ದಿಗ್ಗಜ ಮ್ಯಾಥ್ಯೂ ಹೇಡನ್ (8,625 ರನ್) ಅವರ ಟೆಸ್ಟ್ ದಾಖಲೆಗಳನ್ನು ಮುರಿದಿದ್ದಾರೆ. ವಿರಾಟ್ ಕೊಹ್ಲಿ ಇಲ್ಲಿಯವರೆಗೂ 11 ಟೆಸ್ಟ್ ಪಂದ್ಯಗಳಿಂದ 49.29ರ ಸರಾಸರಿಯಲ್ಲಿ 29 ಶತಕಗಳು ಹಾಗೂ 30 ಅರ್ಧಶತಕಗಳ ಮೂಲಕ 8676 ರನ್ ಗಳಿಸಿದ್ದಾರೆ. 254* ಇವರ ಗರಿಷ್ಠ ಸ್ಕೋರ್ ಆಗಿದೆ.
ವೆಸ್ಟ್ ಇಂಡೀಸ್ ವಿರುದ್ಧ 500ನೇ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವ ವಿರಾಟ್ ಕೊಹ್ಲಿ, ತಮ್ಮ ಟೆಸ್ಟ್ ವೃತ್ತಿ ಜೀವನದ 29ನೇ ಹಾಗೂ ಒಟ್ಟಾರೆ 76ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲಿದೆ.
ಭಾರತದ ಪರ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 200 ಟೆಸ್ಟ್ ಪಂದ್ಯಗಳಿಂದ 53.78ರ ಸರಾಸರಿಯಲ್ಲಿ 15,921 ರನ್ ಬಾರಿಸಿ ಅಗ್ರ ಸ್ಥಾನದಲ್ಲಿದ್ದರೆ, ಕನ್ನಡಿಗ ರಾಹುಲ್ ದ್ರಾವಿಡ್ 164 ಪಂದ್ಯಗಳಿಂದ 13,288 ರನ್ ಗಳಿಸಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಟೀಮ್ ಇಂಡಿಯಾ ಪರ ಮೊಟ್ಟ ಮೊದಲ 10 ಸಾವಿರ ರನ್‌ಗಳನ್ನು ಗಳಿಸಿದ ಲಿಟ್ಲ್ ಮಾಸ್ಟರ್ ಸುನೀಲ್ ಗವಾಸ್ಕರ್ (10,122 ರನ್) ಮತ್ತು ಟೆಸ್ಟ್ ಸ್ಪೆಷಲಿಸ್ಟ್ ವಿವಿಎಸ್ ಲಕ್ಷ್ಮಣ್ (8,781 ರನ್) ನಂತರದ 3 ಮತ್ತು 4ನೇ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ (8676 ರನ್) 5ನೇ ಸ್ಥಾನ ಅಲಂಕರಿಸಿದ್ದಾರೆ.