ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಅನೇಕರ ಅಸಮಾಧಾನಕ್ಕೆ ಗುರಿಯಾಗಿದ್ದ ಬಿ.ವೈ.ವಿಜಯೇಂದ್ರ ಇಂದು ಶಾಸಕ ರಮೇಶ್ ಜಾರಕಿಹೊಳಿ ಮನೆಗೆ ಭೇಟಿ ನೀಡಿದರು. ಆ ಮೂಲಕ ಅಸಮಾಧಾನಗೊಂಡಿರುವ ಪಕ್ಷದ ನಾಯಕರ ಮನವೊಲಿಕೆಗೆ ವಿಜಯೇಂದ್ರ ಮುಂದಾಗಿದ್ದಾರೆ. ಸದಾಶಿವನಗರದ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಬೆಳಗ್ಗೆ ವಿಜಯೇಂದ್ರ ಭೇಟಿ ನೀಡಿದರು. ಈ ವೇಳೆ ವಿಜಯೇಂದ್ರಗೆ ಜಾರಕಿಹೊಳಿ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಇಬ್ಬರೂ ಒಟ್ಟಿಗೆ ಕುಳಿತು ಉಪಾಹಾರ ಸೇವಿಸಿದರು.
ವಿಜಯೇಂದ್ರ ನೇಮಕ ಹಾಗೂ ವಿಪಕ್ಷ ನಾಯಕ ಸ್ಥಾನವನ್ನು ಉತ್ತರ ಕರ್ನಾಟಕಕ್ಕೆ ಕೊಡದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅತೃಪ್ತಿಗೊಂಡಿದ್ದರು. ಹೀಗಾಗಿ ಅವರ ಮನವೊಲಿಕೆಗೆ ವಿಜಯೇಂದ್ರ ಮುಂದಾಗಿದ್ದಾರೆ. ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ವಿಜಯೇಂದ್ರ,
ರಮೇಶ್ ಜಾರಕಿಹೊಳಿ ಅವರ ನಡೆ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ನಡೆಯುತ್ತಿತ್ತು. ಕೆಲವು ಸಲ ಅವರು ಅಸಮಾಧಾನ ತೋಡಿಕೊಂಡಿದ್ದರು. ನನ್ನ ಜವಾಬ್ದಾರಿ ಎಲ್ಲರನ್ನೂ ಪಕ್ಷದಲ್ಲಿ ಜೊತೆಗೆ ಕರೆದೊಯ್ಯುವುದು. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಅರ್ಧ ಗಂಟೆ ಚರ್ಚೆ ಮಾಡಿದ್ದೇನೆ. ಮೋದಿಯವರು ಮತ್ತೆ ಪ್ರಧಾನಿ ಆಗಬೇಕು. ಪಕ್ಷದಲ್ಲಿ ಸಹಕಾರ ಕೊಡ್ತೇನೆ ಅಂತ ಹೇಳಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದರು.