ಚಿತ್ರದುರ್ಗ: ಹಸುವಿನ ಮರಣೋತ್ತರ ಪರೀಕ್ಷೆಯ ವರದಿ ನೀಡುವಂತೆ ಪಶು ವೈದ್ಯಾಧಿಕಾರಿಯೊಬ್ಬರಲ್ಲಿ ( Veterinary Doctor ) ರೈತನೊಬ್ಬ ಮನವಿ ಮಾಡಿದ್ದಾನೆ. ಈ ವರದಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಪರಿಣಾಮ, ಈಗ ಲೋಕಾಯುಕ್ತರ ( Karnataka Lokayukta ) ಬಲೆಗೆ ಬಿದ್ದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರಿನ ಪಶು ಆಸ್ಪತ್ರೆಯ ವೈದ್ಯ ಡಾ.ತಿಪ್ಪೇಸ್ವಾಮಿ ಎಂಬುವರೇ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಂತ ವೈದ್ಯರಾಗಿದ್ದಾರೆ.
ಕಾಗಳಗೆರೆ ಗ್ರಾಮದ ರೈತ ಎಸ್ ಸ್ವಾಮಿ ಎಂಬುವರ ಹಸು ಸಾವನ್ನಪ್ಪಿತ್ತು. ಅದರ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡುವಂತೆ ಚಿಕ್ಕಜಾಜೂರಿನ ಪಶು ಆಸ್ಪತ್ರೆಯ ವೈದ್ಯ ಡಾ.ತಿಪ್ಪೆಸ್ವಾಮಿ ಅವರಿಗೆ ಮನವಿ ಮಾಡಿದ್ದರು.
ಹಸುವಿನ ಮರಣೋತ್ತರ ಪರೀಕ್ಷೆ ವರದಿ ನೀಡಲು 7,000ರೂ ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ರೈತ ಎಸ್ ಸ್ವಾಮಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಇಂದು ಹಸುವಿನ ಮರಮೋತ್ತರ ಪರೀಕ್ಷೆ ವರದಿ ನೀಡಲು 7,000 ಲಂಚದ ಹಣ ಪಡೆಯುತ್ತಿದ್ದಾಗ ಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಂತ ಪಶು ವೈದ್ಯನನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.