ತುಂಡುಡುಗೆ ಹಾಕಿಕೊಂಡು ಓಡಾಡುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಅರೆಸ್ಟ್ ಆಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಕಾಫಿ ಕುಡಿಯಲೆಂದು ಹೋಟೆಲ್ ಗೆ ಬಂದಿದ್ದ ಉರ್ಫಿಯನ್ನು ಮಹಿಳಾ ಪೊಲೀಸ್ ಪೇದೆಗಳು ಕರೆದುಕೊಂಡು ಹೋಗಿ ಪೊಲೀಸ್ ವ್ಯಾನ್ ನಲ್ಲಿ ಕೂರಿಸುವ ವಿಡಿಯೋ ಅದಾಗಿದ್ದು, ಪೊಲೀಸರು ಉರ್ಫಿಯನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ರೆಸ್ಟೋರೆಂಟ್ ಮುಂದೆಯೇ ಮಹಿಳಾ ಪೊಲೀಸರಿಗೆ ಉರ್ಫಿ ಪ್ರಶ್ನೆ ಮಾಡುತ್ತಾರೆ. ಯಾಕಾಗಿ ನನ್ನನ್ನು ಅರೆಸ್ಟ್ ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ. ಅರೆಬರೆ ಬಟ್ಟೆ ಹಾಕಿಕೊಂಡು ಹೀಗೆ ಬೀದಿಗೆ ಬರಬಹುದೆ? ಎಂದು ಪೊಲೀಸರು ಪ್ರಶ್ನೆ ಮಾಡುತ್ತಾರೆ.
ಆನಂತರ ಪೊಲೀಸ್ ವ್ಯಾನ್ ನಲ್ಲಿ ಉರ್ಫಿಯನ್ನು ಕೂರಿಸಿಕೊಂಡು ಹೊರಡುತ್ತಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಉರ್ಫಿ ಜಾವೇದ್ ಸಾರ್ವಜನಿಕವಾಗಿ ಅಶ್ಲೀಲತೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್, ಈ ಹಿಂದೆಯಷ್ಟೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಮುಂಬೈ ಪೊಲೀಸರು ಉರ್ಫಿ ಜಾವೇದ್ ಗೆ ಸಮನ್ಸ್ ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದರು.