ನವದೆಹಲಿ: ಇತ್ತೀಚೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಹಿಂದೂ ಮಹಾಸಭಾ ಗಣಪತಿ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿದೆ. ಆದರೆ ಭಾನುವಾರ ನಡೆದ ಈದ್ ಮಿಲಾದ್ ರ್ಯಾಲಿಯಲ್ಲಿ ಶಾಂತಿಕದಡಲು ಪ್ರಯತ್ನಿಸಲಾಗಿದೆ. ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳಬೇಕು. ಇಲ್ಲದಿದ್ದರೆ ಶಿವಮೊಗ್ಗದಲ್ಲಿ ಹತ್ತಿರುವ ಕಿಡಿ ರಾಜ್ಯಕ್ಕೆ ಹಬ್ಬಿದರೂ ಆಶ್ಚರ್ಯವಿಲ್ಲ ಎಂದು ಶಿಕಾರಿಪುರ ಶಾಸಕ ಬಿ.ವೈ ವಿಜಯೇಂದ್ರ ಎಚ್ಚರಿಸಿದರು.
ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಶಿವಮೊಗ್ಗ ಪೋಲಿಸರು ರ್ಯಾಲಿಗೆ ಒಳ್ಳೆಯ ಭದ್ರತೆ ನೀಡಿದ್ದರು. ಇದರ ನಡುವೆಯೂ ಶಾಂತಿ ಕದಡುವ ಕೆಲಸ ನಡೆದಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳಬೇಕು. ಇಲ್ಲವಾದರೆ ಶಾಂತಿ ಕದಡುವುದಕ್ಕೆ ಕುಮ್ಮಕ್ಕು ಕೊಟ್ಟ ಹಾಗೆ ಆಗುತ್ತದೆ ಎಂದರು. ಶಿವಮೊಗ್ಗದಲ್ಲಿ ಕಲ್ಲು ತೂರಾಟ ಏನು ಹೊಸದಲ್ಲ ಎಂಬ ಗೃಹ ಸಚಿವರ ಹೇಳಿಕೆ ಬಗ್ಗೆ ಮಾತನಾಡಿ, ಇದರ ಅರ್ಥ ಯಾರು ಬೇಕಾದ್ರು ಕಲ್ಲು ತೂರಾಟ ನಡೆಸಬಹುದು ಅಂತನಾ? ಗೃಹ ಸಚಿವ ಜಿ.ಪರಮೇಶ್ವರ್ ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಇಂತಹ ಹೇಳಿಕೆಗಳಿಂದ ಅವರೇ ಪರ್ಮಿಷನ್ ಕೊಟ್ಟಹಾಗೆ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.