ಬೆಂಗಳೂರು: ಯಮಲೂರು-ಬೆಳ್ಳಂದೂರು ಕೆರೆ ರಸ್ತೆಯಲ್ಲಿ ಇಂದಿನಿಂದ ಲಘು ವಾಹನಗಳಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ದುರಸ್ತಿ ಕಾರ್ಯ ಹಿನ್ನೆಲೆ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಯಮಲೂರು-ಬೆಳ್ಳಂದೂರು ಕೆರೆ ರಸ್ತೆಯನ್ನು ಇಂದಿನಿಂದ ದ್ವಿಚಕ್ರವಾಹನ, ಆಟೋರಿಕ್ಷಾ ಮತ್ತು ಕಾರುಗಳಂತಹ ಲಘು ಮೋಟಾರು ವಾಹನಗಳ ಸಂಚಾರಕ್ಕೆ ತೆರೆಯಲಾಗಿದೆ. ಈ ಸಂಬಂಧ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಮುಖ್ಯ ಇಂಜಿನಿಯರ್ ಬಸವರಾಜ ಕಬಾಡೆ ಮಾತನಾಡಿ, ಸೇತುವೆ ಮರುನಿರ್ಮಾಣದಿಂದಾಗಿ ಯಮಲೂರು-ಬೆಳ್ಳಂದೂರು ಕೆರೆ ಕೋಡಿ ರಸ್ತೆ ಬಂದ್ ಆಗಿತ್ತು. ಹೆವಿ ವಾಹನಗಳ ಸಂಚಾರಕ್ಕೆ ಸದ್ಯ ಅನುಮತಿ ಇಲ್ಲ. ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. ಹಳೆಯ ಸೇತುವೆ ಕೇವಲ 12 ಮೀಟರ್ ಅಗಲವಿದ್ದು, ಮರುನಿರ್ಮಾಣ ಮಾಡಲಾಗಿದೆ ಎಂದು ಇಂಜಿನಿಯರ್ ಬಸವರಾಜ ಕಬಾಡೆ ಮಾಹಿತಿ ನೀಡಿದರು. ‘ತೆರಪಿನ ಅಗಲವು ಕೇವಲ 15-16 ಮೀಟರ್ ಆಗಿತ್ತು. ಈಗ ನೀರು ಹರಿಯುವಂತೆ ಸಂಪರ್ಗ ಗಾತ್ರವನ್ನು 24 ಮೀಟರ್‌ಗೆ ಮತ್ತು ರಸ್ತೆಯ ಅಗಲವನ್ನು 30 ಮೀಟರ್‌ಗೆ ಹೆಚ್ಚಿಸುತ್ತಿದ್ದೇವೆ. ರಸ್ತೆ ಮಟ್ಟಕ್ಕಿಂತ ಸುಮಾರು ಎರಡು ಅಡಿ ಎತ್ತರವಿದ್ದು, ಬೆಳ್ಳಂದೂರು ಕೆರೆಯಿಂದ ನೀರು ಸರಾಗವಾಗಿ ಹರಿಯುತ್ತದೆ ಎಂದರು.