ಶಿವಮೊಗ್ಗ: ಇತ್ತೀಚೆಗೆ ಮಾಲೂರು ತಾಲ್ಲೂಕಿನ ಟೇಕಲ್‌ನ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛಗೊಳಿಸಿದ ಘಟನೆ ದೇಶಾದ್ಯಾಂತ ಸುದ್ದಿಯಾಗಿ ತಲೆ ತಗ್ಗಿಸುವಂತಾಗಿತ್ತು.ರಾಜ್ಯ ಸರ್ಕಾರ ಇದರ ಬೆನ್ನಲ್ಲೆ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯವನ್ನು ಶುಚಿಗೊಳಿಸಲು ಶಾಲಾ ಮಕ್ಕಳನ್ನು ಬಳಸಿಕೊಳ್ಳುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದ್ರೂ, ಶಿಕ್ಷಣ ಸಚಿವರ ತವರು ಜಿಲ್ಲೆ ಶಿವಮೊಗ್ಗದ ಭದ್ರಾವತಿ ತಾಲ್ಲೂಕಿನ ಕೋಮಾರನಹಳ್ಳಿ ಗ್ರಾಮ ಪಂಚಾಯ್ತಿಯ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತರಗತಿಯ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಚಗೊಳಿಸಲಾಗಿದೆ.
ಶಾಲಾ ಹೆಣ್ಣು ಮಕ್ಕಳು ಶೌಚಾಲಯವನ್ನು ಸ್ವಚ್ಚಗೊಳಿಸುತ್ತಿರುವ ದೃಷ್ಯ ವೈರಲ್ ಆಗಿದೆ. ಶೌಚಾಲಯ ನೋಡುತ್ತಿದ್ದರೆ ವಾಂತಿ ಬರುವ ಹಾಗಿದೆ. ದುರ್ವಾಸನೆ ಬರುತ್ತಿದ್ದರೂ, ಮಕ್ಕಳು ಟಾಯ್ಲೆಟ್ ಕ್ಲೀನ್ ಮಾಡುತ್ತಿರುವ ದೃಷ್ಯ ನೋಡಿದರೆ ಎಂತವರೂ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಾರೆ.
ಶಾಲೆಯ ಮುಖ್ಯ ಶಿಕ್ಷಕರಾದ ಶಂಕರಪ್ಪ ಹಾಗೂ ಇತರೆ ಶಿಕ್ಷಕರು ಶಾಲಾ ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ. ಶಾಲಾ ಮಕ್ಕಳು ವಾರಕ್ಕೊಮ್ಮೆ ಶೌಚಾಲಯವನ್ನು ಸ್ವಚ್ಚಗೊಳಿಸಬೇಕು. ಪ್ರತಿದಿನ ಶಾಲೆಯ ಕಸಗುಡಿಸಬೇಕು ಎಂದು ವಿದ್ಯಾರ್ಥಿಗಳೇ ಅಳಲು ತೋಡಿಕೊಂಡಿದ್ದಾರೆ.