ಹುಲಿ ಉಗುರು ಕೇಸ್; ಅರಣ್ಯಾಧಿಕಾರಿಗಳ ಕ್ರಮ ಖಂಡಿಸಿ ಹೈಕೋರ್ಟ್ ಮೊರೆ ಹೋದ ಜಗ್ಗೇಶ್

ಬೆಂಗಳೂರು;- ಹುಲಿ ಉಗುರು ಪ್ರಕರಣ ಸಂಬಂಧಿಸಿದಂತೆ ಮನೆ ಶೋಧಿಸಿದ ಅರಣ್ಯಾಧಿಕಾರಿಗಳ ಕ್ರಮ ಕಾನೂನುಬಾಹಿರ ಎಂದು ನಟ ನವರಸ ನಾಯಕ ಹಾಗೂ ರಾಜಕಾರಣಿ ಜಗ್ಗೇಶ್ ಹೇಳಿದ್ದಾರೆ. ಹೀಗಾಗಿ ಕಾನೂನು ಬಾಹಿರ ಕ್ರಮವೆಂದು ಘೋಷಿಸಬೇಕು ಎಂದು ಕೋರಿ ನಟ ಜಗ್ಗೇಶ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಹುಲಿ ಉಗುರಿನ ಪೆಂಟೆಂಡ್‌ ಧರಿಸಿದ ಬಗ್ಗೆ ತಮ್ಮ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿ ಜಗ್ಗೇಶ್‌ ಅವರಿಗೆ 2023ರ ಅ.25ರಂದು ಬೆಂಗಳೂರಿನ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್‌ ನೀಡಿದ್ದರು. ಜತೆಗೆ, ಅ.25ರಂದು ಮಲ್ಲೇಶ್ವರದಲ್ಲಿರುವ ಜಗ್ಗೇಶ್‌ ಮನೆಗೆ ಭೇಟಿ ನೀಡಿ ಶೋಧ ನಡೆಸಿ, ವಿವಾದಿತ ಹುಲಿ ಉಗುರಿನ ಪೆಂಡೆಂಟ್‌ ಪಡೆದು ತೆರಳಿದ್ದರು.

ಟಿವಿಗೆ ನೀಡಿದ ಸಂದರ್ಶನವೊಂದನ್ನು ಆಧರಿಸಿ ಚಿನ್ನಲೇಪಿತ ಹುಲಿ ಉಗುರಿನ ಪೆಂಡೆಂಟ್‌ ಧರಿಸುವ ಮೂಲಕ ವನ್ಯ ಜೀವಿ ಸಂರಕ್ಷಣಾ ಕಾಯ್ದೆ-1972 ಅನ್ನು ಉಲ್ಲಂಘಿಸಿರುವುದಾಗಿ ತಮ್ಮ ವಿರುದ್ಧ ಸುಳ್ಳು ಮತ್ತು ದಾರಿ ತಪ್ಪಿಸುವ ಪ್ರಚಾರ ಮಾಡಲಾಗಿದೆ. ಆ ಪ್ರಚಾರವನ್ನು ಒಳಗೊಂಡ ವಿಡಿಯೋ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದೆ. ಅದರ ಬೆನ್ನಲ್ಲೇ ತಮ್ಮ ಮೇಲಿನ ಆರೋಪಗಳು ಸುಳ್ಳು ಎಂದು ಖುದ್ದು ತಾವೇ 2023ರ ಅ.21ರಂದು ಸ್ಪಷ್ಟೀಕರಣ ನೀಡಿದ್ದೇನೆ ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದಾರೆ.

ಸ್ಪಷ್ಟೀಕರಣ ನೀಡಿದ ನಂತರವೂ ಅ.25ರಂದು ನೋಟಿಸ್‌ ಜಾರಿಗೊಳಿಸಿ, ಅರಣ್ಯಾಧಿಕಾರಿಗಳ ಮುಂದೆ ಹಾಜರಾಗಲು ನೋಟಿಸ್‌ ನೀಡಲಾಗಿದೆ. ನೋಟಿಸ್‌ಗೆ ಉತ್ತರಿಸುವ ಮೊದಲೇ ಬೆಂಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ 14 ಮಂದಿ ಅಧಿಕಾರಿಗಳು ಮಲ್ಲೇಶ್ವರದ ತಮ್ಮ ಮನೆಗೆ ಭೇಟಿ ನೀಡಿ ಶೋಧನೆ ನಡೆಸಿದ್ದಾರೆ. ಇದು ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ತಮಗೆ ದೊರೆತಿರುವ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆಧ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ಈ ಕ್ರಮ ಕಾನೂನು ಬಾಹಿರವೆಂದು ಘೋಷಿಸಬೇಕು ಮತ್ತು ತಮ್ಮ ವಿರುದ್ಧದ ನೋಟಿಸ್‌ ರದ್ದುಪಡಿಸಬೇಕು ಎಂದು ಜಗ್ಗೇಶ್‌ ಅರ್ಜಿಯಲ್ಲಿ ಕೋರಿದ್ದಾರೆ

Loading

Leave a Reply

Your email address will not be published. Required fields are marked *