”ಎನ್ಡಿಎ ಜತೆ ಮೈತ್ರಿಗೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮೊದಲಾಗಿ ಜೆಡಿಎಸ್ನ 19 ಎಂಎಲ್ಎಗಳು, 8 ಎಂಎಲ್ಸಿಗಳು, ಪಕ್ಷದ ಅಧ್ಯಕ್ಷ ಇಬ್ರಾಹಿಂ ಅವರ ಜತೆ ಎರಡು ಸುತ್ತಿನ ಮಾತುಕತೆ ನಡೆಸಿ ಬಳಿಕ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿದ್ದಾರೆ,” ಎಂದು ಮಾಜಿ ಪ್ರಧಾನಿ, ರಾಜ್ಯಸಭೆ ಸದಸ್ಯ ಎಚ್ ಡಿ ದೇವೇಗೌಡ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು,
”ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಮಾತುಕತೆಯಲ್ಲಿ ಹಿಂದಿನ ನಾಲ್ಕು ಚುನಾವಣೆಯ ಮತ ಗಳಿಕೆ ಒಟ್ಟುಗೂಡಿಸಿ ಒಂದು ನಿರ್ಧಾರಕ್ಕೆ ಬರಲಾಗಿದೆ. ದಸರಾ ಬಳಿಕ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ,” ಎಂದರು. ”ಮಂಡ್ಯ ಸೇರಿದಂತೆ ಯಾವುದೇ ಕ್ಷೇತ್ರಗಳ ಬಗ್ಗೆ ಟಿಕೆಟ್ ಅಂತಿಮಗೊಂಡಿಲ್ಲ. ಸದ್ಯ ಹಾಸನ ಜೆಡಿಎಸ್, ರಾಮನಗರ ಕಾಂಗ್ರೆಸ್ ಕೈಯಲ್ಲಿದೆ. ಉಳಿದೆಡೆ ಬಿಜೆಪಿಯೇ ಇದೆ. ಕಾಂಗ್ರೆಸ್ 28 ಕ್ಷೇತ್ರ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆ ಕಾರಣಕ್ಕೆ ಬಿಜೆಪಿ, ಜೆಡಿಎಸ್ ಒಂದುಗೂಡಿ ಹೋಗುವ ನಿರ್ಧಾರಕ್ಕೆ ಬಂದಿದ್ದೇವೆ,” ಎಂದರು.