ಡಿಸಿಎಂ ವಿಚಾರದಲ್ಲಿ ರಾಜಣ್ಣ ಹೇಳೋದರಲ್ಲಿ ತಪ್ಪಿಲ್ಲ: ಡಾ. ಜಿ ಪರಮೇಶ್ವರ್

ಬೆಂಗಳೂರು: ಮೂರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ಸಚಿವ ಕೆ.ಎನ್ ರಾಜಣ್ಣ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ! ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಡಿಸಿಎಂ ವಿಚಾರದಲ್ಲಿ ರಾಜಣ್ಣ ಹೇಳೋದರಲ್ಲಿ ತಪ್ಪಿಲ್ಲ. ಅವರು ಲೋಕಸಭಾ ಚುನಾವಣೆ ದೃಷ್ಟಿಯಿಂದ ಹೇಳಿದ್ದಾರೆ ಎಂದರು.

“ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಬೇಕು. ಕೆಲವು ನಿರ್ದಿಷ್ಟ ಸಮುದಾಯಗಳನ್ನು ಸೆಳೆಯಬೇಕು ಎಂಬ ದೃಷ್ಟಿಯಿಂದ ಹೇಳಿದ್ದಾರೆ .ಒಂದು ಸಂದೇಶ ಹೋಗಲಿ ಎಂದು ಅವರು ಹೇಳಿದ್ದಾರೆ” ಎಂದು ಸಮರ್ಥಿಸಿಕೊಂಡರು. ರಾಜಣ್ಣ ಅವರು ತಪ್ಪು ಮಾಡಿದರು, “ತಪ್ಪು ಹೇಳಿದರು ಅನ್ನೋದು ತಪ್ಪು. ಡಿಸಿಎಂ ವಿಚಾರವಾಗಿ ರಾಜಣ್ಣ ಅವರು ವೈಯುಕ್ತಿಕ ಹೇಳಿಕೆ ಕೊಟ್ಟಿದ್ದಾರೆ. ನಾನು ವೈಯುಕ್ತಿಕ ಹೇಳಿಕೆ ಕೊಡುತ್ತೇನೆ.ಆದರೆ ಅವರು ಯಾವ ಅರ್ಥದಲ್ಲಿ ಕೊಟ್ಟಿದ್ದಾರೆ ಅನ್ನೋದು ಮುಖ್ಯ” ಎಂದರು.

“ಅಂತಿಮವಾಗಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಸಂಪೂರ್ಣವಾಗಿ ಎಲ್ಲವೂ ಹೈ ಕಮಾಂಡ್ ಗೆ ಬಿಟ್ಟಿರುವುದು. ಲೋಕಸಭೆಯಲ್ಲಿ ಸೋತಾಗ ಬಹುಮತ ಇಲ್ಲ ಎಂದು ಸರ್ಕಾರ ವಿಸರ್ಜಸಿದ ಘಟನೆ ನಡೆದಿದೆ ಎಂಬ ರಾಜಣ್ಣ ಹೇಳಿಕೆ ಇದ್ದರೆ ಇರಬಹುದು. ಇದಕ್ಕೆ ಪೂರಕವಾಗಿ ಈ ಹಿಂದೆ ಅಂತಹ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಈ ಹಿಂದೆ ರಾಮಕೃಷ್ಣ ಹೆಗ್ಡೆ ಅವರ ಕಾಲದಲ್ಲಿ ಹಾಗೂ ಬೇರೆ ಬೇರೆ ಸಂದರ್ಭದಲ್ಲಿ ಇಂತಹಾ ಪ್ರಸಂಗಗಳು ನಡೆದಿದೆ. ಆದರೆ ಈ ಬಾರಿ ಹಾಗೆ ಆಗಬಾರದು ಎಂದು ಎಚ್ಚರಿಕೆ ಕೊಟ್ಟಿರಬಹುದು” ಎಂದರು.

Loading

Leave a Reply

Your email address will not be published. Required fields are marked *