ಬಿ.ವೈ ವಿಜಯೇಂದ್ರ ಮತ್ತು ನನ್ನ ನಡುವೆ ಯಾವುದೇ ಮನಸ್ತಾಪ ಇಲ್ಲ: ಸಿ.ಟಿ ರವಿ

ನವದೆಹಲಿ: ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಮತ್ತು ನನ್ನ ನಡುವೆ ಯಾವುದೇ ಮನಸ್ತಾಪ ಇಲ್ಲ, ನಾನು ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಹಿನ್ನೆಲೆ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದು ಮಾಜಿ ಶಾಸಕ ಸಿ.ಟಿ ರವಿ (CT Ravi) ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕ ಭವನದಲ್ಲಿ ಮಾತನಾಡಿದ ಅವರು, ನಾನು ಮಧ್ಯಪ್ರದೇಶಕ್ಕೆ ತೆರಳುವ ಮುನ್ನ ಬಿ.ವೈ ವಿಜಯೇಂದ್ರ ಜೊತೆಗೆ ರಾಜ್ಯದ ಕೆಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಪಕ್ಷದ ವಿಚಾರದಲ್ಲಿ ಯಾರನ್ನೂ ಬಿಟ್ಟುಕೊಟ್ಟಿಲ್ಲ, ನನ್ನ ಪಕ್ಷ ನಿಷ್ಠೆಗೆ ಕಾಂಗ್ರೆಸ್ (Congress) ನಿಂದ ಸರ್ಟಿಫಿಕೇಟ್ ಬೇಕಿಲ್ಲ, ನನಗೆ ಅಸಮಾಧಾನ ಇಲ್ಲ. ಯಾರೇ ಅಧ್ಯಕ್ಷರಾದರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ಮಾತನಾಡಿ, ಪಕ್ಷದ ವೀಕ್ಷಕರರಾಗಿ ನಿರ್ಮಲಾ ಸೀತಾರಾಮನ್, ದುಷ್ಯಂತ್ ಕುಮಾರ್ ಹೋಗಿದ್ದಾರೆ. ಎಲ್ಲ ನಾಯಕರ ಅಭಿಪ್ರಾಯ ಪಡೆಯಲಿದ್ದಾರೆ. ಹಿಂದೆಯೂ ಅಭಿಪ್ರಾಯ ಪಡೆದು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಆದಷ್ಟು ಬೇಗ ಆಯ್ಕೆಯಾಗಲಿ ಅನ್ನೊದು ಎಲ್ಲರ ಆಶಯ ಎಂದರು. ಉತ್ತರ ಕರ್ನಾಟಕಕ್ಕೆ ವಿಪಕ್ಷ ನಾಯಕನ ಆಯ್ಕೆಯಾಗಬೇಕು ಎನ್ನುವ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ಯತ್ನಾಳ್ ಹಿರಿಯ ನಾಯಕರು, ಅನುಭವಿ, ಪಕ್ಷದಲ್ಲಿ ತಿರ್ಮಾನ ಹೇಗಾಗುತ್ತೆ ಅವರಿಗೆ ಗೊತ್ತಿದೆ. ಹೈಕಮಾಂಡ್ ತಿರ್ಮಾನದವರೆಗೂ ಕಾಯೋಣ, ಅವರ ಅಡ್ಜಸ್ಟ್‍ಮೆಂಟ್ ರಾಜಕೀಯದ ಆರೋಪಕ್ಕೆ ಉತ್ತರ ಕೊಡಲ್ಲ ಎಂದರು.

Loading

Leave a Reply

Your email address will not be published. Required fields are marked *