ಬೆಂಗಳೂರು: ಕರ್ನಾಟಕ ಹಾಗೂ ತಮಿಳುನಾಡು ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಬಿಜೆಪಿಯವರಿಗೆ ತಮ್ಮದೇ ಪ್ರಧಾನಮಂತ್ರಿಯನ್ನು ಭೇಟಿ ಮಾಡಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಜಲಸಂಪನ್ಮೂಲ ಸಚಿವರೂ ಆದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಕೇಳಿದ್ದಾರೆ. ಮಳೆಯ ತೀವ್ರ ಕೊರತೆಯಿಂದಾಗಿ ನಮ್ಮ ರಾಜ್ಯದಲ್ಲೇ ಕುಡಿಯುವ ನೀರಿಲ್ಲ. ಅದರಲ್ಲೂ, ಬೆಂಗಳೂರಿಗೆ ತುಂಬಾ ಸಮಸ್ಯೆಯಾಗುವ ಪರಿಸ್ಥಿತಿ ಇದೆ. ಹೀಗಿರುವಾಗ, ತಮಿಳುನಾಡಿಗೆ ನೀರು ಹರಿಸಬೇಕು ಎಂಬ ಆದೇಶ ಪಾಲಿಸಲು ಅಸಾಧ್ಯವಾಗುತ್ತದೆ ಎಂದು ಸಚಿವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಈಗಾಗಲೇ ಸರ್ವಪಕ್ಷ ಸಭೆ ನಡೆಸಿದ್ದಾರೆ. ಚರ್ಚೆಗಾಗಿ ಪ್ರಧಾನಮಂತ್ರಿಯವರ ಸಮಯ ಕೇಳಿದ್ದರೂ ಅವರಿನ್ನೂ ಸಮಯ ಕೊಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಬಿಜೆಪಿಯ ಇತರ ಸಂಸದರು ಇವರೆಲ್ಲಾ ಸೇರಿ ಪ್ರಧಾನಿಯವರ ಜೊತೆ ಚರ್ಚೆಗೆ ಸಮಯ ನಿಗದಿಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.