ಉಡುಪಿ: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು (D. Devaraj Urs) ಜನ್ಮದಿನ ಆಗಸ್ಟ್ 20ರಂದು ನಡೆಯಲಿದೆ. ಬಿಜೆಪಿ ಸರ್ಕಾರ ಇದ್ದಾಗ ಮೂರು ದಿನಗಳ ಕಾಲ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ದೇವರಾಜ ಅರಸು ಉತ್ಸವ ಆರಂಭ ಮಾಡಿತ್ತು. ಸಿದ್ದರಾಮಯ್ಯ (Siddaramaiah) ಸರ್ಕಾರ ಈ ಪರಿಪಾಠ ಕೈಬಿಟ್ಟಿದೆ. ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದುಕು ಬರಹ ಸಾಮಾಜಿಕ ನ್ಯಾಯ ವಿಚಾರವನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿತ್ತು. ಹಾಸ್ಟೆಲ್ ಮಕ್ಕಳಿಂದ ಪ್ರತಿಭಾ ಪ್ರದರ್ಶನ ಮಾಡಿಸಿದ್ದೆವು, ವಿಚಾರ ಸಂಕೀರ್ಣವನ್ನು ಮಾಡಿದ್ದೆವು. ರಾಜ್ಯ ಮಟ್ಟದ ಪ್ರಶಸ್ತಿ ನೀಡಿದ್ದೆವು, ಅರಸು ಆದರ್ಶ ಪಾಲಿಸಿದವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿದ್ದೆವು.
ಸಿದ್ದರಾಮಯ್ಯ ಹಿಂದುಳಿದವರ ಕಾಳಜಿ ಬಗ್ಗೆ ಮಾತನಾಡುತ್ತಾರೆ. ಈ ಸರ್ಕಾರ ಕೂಡ ಮೂರು ದಿನಗಳ ಉತ್ಸವ ಮಾಡಬೇಕೆಂದು ಸಿದ್ದರಾಮಯ್ಯಗೆ ಪತ್ರ ಬರೆದಿದ್ದೆ. ದುರಾದೃಷ್ಟವಶಾತ್ ಮುಖ್ಯಮಂತ್ರಿ ಕಚೇರಿಯಿಂದ ಹಿಂಬರಹ ಬಿಟ್ಟರೆ ಬೇರೇನೂ ಪ್ರತಿಕ್ರಿಯೆ ಬಂದಿಲ್ಲ. ಹಿಂದಿನ ಸರ್ಕಾರ ಮಾಡಿದ ಅರಸು ಉತ್ಸವ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.