ಶಿವಮೊಗ್ಗ: ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ನನಗೆ ಅಧಿಕೃತ ಮಾಹಿತಿ ಇಲ್ಲ. ನಮ್ಮ ಮುಖಂಡರ ಹೇಳಿಕೆಗಳನ್ನ ನಾನು ಗಮನಿಸಿದ್ದೇನೆ. ಮೈತ್ರಿ ವಿಚಾರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಯನ್ನೂ ನಾನು ಗಮನಿಸಿದ್ದೇನೆ. ಊರಿಗೆ ಬಂದವಳು ನೀರಿಗೆ ಬರೋದಿಲ್ವಾ..? ನೋಡೋಣ ಎಂದು ಬಿಜೆಪಿ ಮುಖಂಡ ಸಿಟಿ ರವಿ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಬಗ್ಗೆ ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಂಡರೂ ಕೂಡ ಅಳೆದು ತೂಗಿ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಅವರ ತೀರ್ಮಾನಕ್ಕೆ ಕಾದಿದ್ದೇವೆ. ಸದ್ಯ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಏನು ಪ್ರಯತ್ನ ಮಾಡಬೇಕೋ ಅದನ್ನ ಮಾಡುತ್ತೇವೆ. ಜೆಡಿಎಸ್ ಜೊತೆ ಮೈತ್ರಿ ಅಗತ್ಯ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಕೆಲ ಸಂಗತಿಗಳನ್ನ ಸಾರ್ವಜನಿಕವಾಗಿ ಮಾತನಾಡುವುದು ಸರಿ ಅಲ್ಲ ಎಂದರು.
ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಠರು ಕಾರಣವಿಲ್ಲದೇ ವಿಳಂಬ ಮಾಡಿಲ್ಲ ಎಂಬ ನಂಬಿಕೆ ಇದೆ. ಏನು ಎಂದು ನಮಗೆ ಗೊತ್ತಿಲ್ಲ. ನಾವೂ ಕೂಡ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಆದಷ್ಟು ಬೇಗ ಆಗಲಿ. ಮುಂದಾಳತ್ವದ ಸೇನಾನಿ ಇಲ್ಲದೇ ಯುದ್ಧ ಗೆದ್ದ ಉದಾಹರಣೆಗಳಿವೆ. ಆದರೆ ಸೇನಾನಿಗಳು ಮುಖ್ಯ, ಬೇಕೇ ಬೇಕು. ಬಿಜೆಪಿ ಪ್ರಯೋಗಶೀಲ ಪಕ್ಷ. ನಾವು ಪ್ರಯೋಗಗಳನ್ನೂ ಮಾಡುತ್ತಿರುತ್ತೇವೆ ಎಂದರು.