ಶಿವಮೊಗ್ಗ: ಬಿಜೆಪಿಯವರು ವಿಪಕ್ಷ ನಾಯಕನನ್ನು ಆಯ್ಕೆ ಮಾಡುವ ತನಕ ಕುಮಾರಸ್ವಾಮಿಯವರೇ ವಿಪಕ್ಷ ನಾಯಕರಾಗಲಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವಾಗ ಒಂದು ಹೊಸ ಪರಂಪರೆಯನ್ನೇ ಸೃಷ್ಟಿಸಿದ್ದಾರೆ. ಅದೇನೆಂದರೆ ಹಳೆಯ ಸರ್ಕಾರವನ್ನು ಟೀಕಿಸುವುದೂ ಆಗಿದೆ. ಈ ಟೀಕೆಗೆ ಬಿಜೆಪಿ ಉತ್ತರ ಕೊಡಬೇಕಾದ ಅವಶ್ಯಕತೆ ಇದೆ. ಅವರಿನ್ನೂ ನಾಯಕನನ್ನೇ ಆಯ್ಕೆ ಮಾಡಿಲ್ಲ ಎಂದರು.
ಆದರೆ ನಮ್ಮ ಪಕ್ಷದ ನಾಯಕ ಕುಮಾರಸ್ವಾಮಿಯವರು ನಿಭಾಯಿಸುತ್ತಿದ್ದಾರೆ. ಬಿಜೆಪಿಯವರು ಕೊನೆ ಪಕ್ಷ ನಾಯಕನನ್ನು ಆಯ್ಕೆ ಮಾಡುವ ತನಕವಾದರೂ ಕುಮಾರಸ್ವಾಮಿಯವರೇ ನಮ್ಮ ಪಕ್ಷದ ಪರವಾಗಿ ನಾಯಕರಾಗಲಿ ಎನ್ನಬೇಕು ಎಂದು ವ್ಯಂಗ್ಯವಾಡಿದರು. ಹೊಸ ಸರ್ಕಾರ ಬಂದಿದೆ. ಬಜೆಟ್ ಕೂಡ ಮಂಡನೆಯಾಗಿದೆ. ಗ್ಯಾರಂಟಿಗಳಿಗೆ ಅನುಕೂಲವಾಗುವಂತಹ ಬಜೆಟ್ ಮಂಡನೆಯಾಗಿದೆ. ಬಜೆಟ್ಗೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ಈ ಬಾರಿಯ ಬಜೆಟ್ ನಲ್ಲಿ ಆಶಾದಾಯಕ ನಿರಾಶಾದಾಯಕ ಎರಡೂ ಇವೆ ಎಂದರು. ಇನ್ನು ಬಜೆಟ್ನಲ್ಲಿ ಕಾರ್ಮಿಕ ಕ್ಷೇತ್ರಕ್ಕೆ ಒತ್ತುಕೊಟ್ಟಿಲ್ಲ. ಪೌರ ಕಾರ್ಮಿಕರ ಖಾಯಂ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.