ಮಂಡ್ಯ: ಮಂಡ್ಯದ ಜನ ಲಾಠಿಗೆ, ಗುಂಡಿಗೆ ಹೆದರುವವರಲ್ಲ ಎಂದು ಮಾಜಿ ಸಚಿವ ಸಿಟಿ ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಕೆರಗೋಡುನಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದನ್ನು ವಿರೋಧಿಸಿ ಸಿಟಿ ರವಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪಾದಯಾತ್ರೆ ನಡೆಸುತ್ತಿದ್ದು, ಈ ವೇಳೆ ಮಾತನಾಡಿದ ಅವರು, ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದ ಬಳಿಕ ಮುಂದಿನ ಹೋರಾಟವನ್ನು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ನಿರ್ಧರಿಸಲಿದ್ದೇವೆ ಎಂದ ರವಿ, ರಾಷ್ಟ್ರಧ್ವಜ ಹಾರಿಸಿದ್ದಕ್ಕೆ ಬಿಜೆಪಿಯ ಅಭ್ಯಂತರವಿಲ್ಲ, ರಾಷ್ಟ್ರಧ್ಚಜ ಸರ್ವಮಾನ್ಯ, ಅದಕ್ಕೆ ಗೌರವ ಸಲ್ಲಿಸುವುದನ್ನು ತಾವು ಕಾಂಗ್ರೆಸ್ ನಿಂದ ಕಲಿಯಬೇಕಿಲ್ಲ, ತಮ್ಮ ಹೋರಾಟವಿರೋದು ಹನುಮ ಧ್ವಜವನ್ನು ತೆರವುಗೊಳಿಸಿರುವುದರ ವಿರುದ್ಧ ಎಂದು ಹೇಳಿದರು.
ಕೆರಗೋಡುನಲ್ಲಿ ಧ್ವಜಸ್ತಂಭ ಇರೋದು ಸರ್ಕಾರಿ ಜಾಗ ಅಂತ ಸರ್ಕಾರ ಈಗ ಹೇಳುತ್ತಿದೆ, ಅದರೆ ಹಿಂದೂ ಕಾರ್ಯಕರ್ತರು ಚಂದಾ ಎತ್ತಿ ಧ್ವಜಸ್ತಂಭದ ನಿರ್ಮಾಣ ಮಾಡಿದ್ದಾರೆ, ಹಿಂದೆ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ ಆಗಿನ ಕಾಂಗ್ರೆಸ್ ಸರ್ಕಾರ ತಮ್ಮ ಕಾರ್ಯಕರ್ತರ ಮೇಲೆ ಗುಂಡು ಹಾರಿಸಿ ಕೊಂದು ಹಾಕಿತ್ತು ಎಂದು ರವಿ ಆವೇಶದಲ್ಲಿ ಹೇಳಿದರು. ಸರ್ಕಾರ ನಿಷೇಧಾಜ್ಞೆ ಹೇರಿರಬಹುದು, ಆದರೆ ಮಂಡ್ಯದ ಜನ ಲಾಠಿಗೆ, ಗುಂಡಿಗೆ ಹೆದರುವವರಲ್ಲ, ಹಿಂದೂ ವಿರೋಧಿ ಸರ್ಕಾರದ ವಿರುದ್ಧ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ರವಿ ಹೇಳಿದರು.