ಜ್ಞಾನವ್ಯಾಪಿ ಮಸೀದಿಯ ಸರ್ವೆ ಕಾರ್ಯಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್

ನವದೆಹಲಿ: ಜ್ಞಾನವ್ಯಾಪಿ ಮಸೀದಿಯಲ್ಲಿ (Gyanvapi Mosque) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನಡೆಸುತ್ತಿರುವ ಸರ್ವೆ ಕಾರ್ಯಕ್ಕೆ ಬುಧವಾರ ಸಂಜೆವರೆಗೂ ಸುಪ್ರೀಂಕೋರ್ಟ್ (Supreme Court) ತಡೆ ನೀಡಿದೆ. ವಾರಣಾಸಿ ಜಿಲ್ಲಾ ನ್ಯಾಯಲಯದ ಆದೇಶದ ವಿರುದ್ಧ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ನೀಡಿದೆ.
ಅಂಜುಮನ್ ಇಂಟೆಝಾಮಿಯಾ ಮಸೀದಿಯ ನಿರ್ವಹಣಾ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ತಾತ್ಕಾಲಿಕ ತಡೆ ನೀಡಿದೆ. ಅಲ್ಲದೇ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ. ಜಿಲ್ಲಾ ನ್ಯಾಯಾಲಯವು ಶುಕ್ರವಾರ ಸಂಜೆ 4:30 ರಂದು ಉತ್ಖನನಕ್ಕೆ ಅನುಮತಿ ನೀಡಿದೆ. ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಇಂದು ಬೆಳಗ್ಗೆ ಎಎಸ್ಐ ಸಮೀಕ್ಷಾ ತಂಡ ಸ್ಥಳಕ್ಕೆ ತಲುಪಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ.
ಕನಿಷ್ಠ ಒಂದು ವಾರದವರೆಗೆ ಸ್ಥಳದಲ್ಲಿ ಯಾವುದೇ ಉತ್ಖನನಗಳು ನಡೆಯುವುದಿಲ್ಲ. ಪ್ರಸ್ತುತ ಅಳತೆ ಪಡೆಯುವುದು, ಫೋಟೋ ತೆಗೆಯುವುದು ನಡೆಯುತ್ತಿದೆ. ಎಎಸ್ಐನ ಹೇಳಿಕೆಯಿಂದ ಯಾವುದೇ ಉತ್ಖನನವನ್ನು ನಡೆಸುತ್ತಿಲ್ಲ ಎಂದು ತೋರುತ್ತದೆ. ಮುಂದಿನ ಸೋಮವಾರದವರೆಗೆ ಮಸೀದಿ ಜಾಗದಲ್ಲಿ ಯಾವುದೇ ಉತ್ಖನನವನ್ನು ನಡೆಸಲು ಯೋಜಿಸುವುದಿಲ್ಲ ಎಂಬ ಎಎಸ್ಐ ಹೇಳಿಕೆಯನ್ನು ನಾವು ದಾಖಲಿಸುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಅರ್ಜಿದಾರರಿಗೆ ಅವಕಾಶ ನೀಡುತ್ತೇವೆ. ಯಾವುದೇ ಆಕ್ರಮಣಶೀಲವಲ್ಲದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ನಾವು ಸ್ಪಷ್ಟಪಡಿಸುತ್ತೇವೆ. ಅರ್ಜಿದಾರರ ವಿಚಾರಣೆಯ ನಂತರ ಹೈಕೋರ್ಟ್ನ ಮುಂದಿನ ನಿರ್ದೇಶನಗಳಿಗೆ ಈ ಆದೇಶ ಒಳಪಟ್ಟಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿದ್ದ ಪೀಠ ಆದೇಶಿಸಿದೆ.

Loading

Leave a Reply

Your email address will not be published. Required fields are marked *