ಹಾಸನ: ಚನ್ನರಾಯಪಟ್ಟಣ ತಾಲೂಕಿನ ಹೊನ್ನಮಾರನಹಳ್ಳಿಯ ನಟೋರಿಯಸ್ ರೌಡಿಶೀಟರ್ ಹಾಗೂ ಕಾನೂನು ಬಾಹಿರ ಚಟುವಟಿಕೆ ಆರೋಪದಡಿ ಗಡಿಪಾರಾಗಿ ಸದ್ಯ ಕಲಬುರಗಿ ಜೈಲಿನಲ್ಲಿರುವ ಮತ್ತೊಬ್ಬ ರೌಡಿ ಶೀಟರ್ ಯಾಚೇನಹಳ್ಳಿ ಚೇತುವಿನ ಮಾಜಿ ಶಿಷ್ಯನಾಗಿದ್ದ ಮಾಸ್ತಿಗೌಡ ಅಲಿಯಾಸ್ ಕೃಷ್ಣ (3೦)ನನ್ನು ಹಾಡುಹಗಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪಟ್ಟಣದ ಬಿಎಂ ರಸ್ತೆಯಲಿರುವ ಧನಲಕ್ಷ್ಮೀ ಚಿತ್ರಮಂದಿರದ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರನ್ನು ಬೆಚ್ಚಿ ಬಿದ್ದಿದ್ದಾರೆ.
ಇನ್ನೋವಾ ಕಾರಿನಲ್ಲಿ ಬಂದ ನಾಲ್ಕೈದು ದುಷ್ಕರ್ಮಿಗಳು ಮಾಸ್ತಿಗೌಡನನ್ನು ಬೆನ್ನಟ್ಟಿದ್ದಾರೆ. ಆತ ಓಡಲು ಆರಂಭಿಸುತ್ತಿದ್ದಂತೆಯೇ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ನಡುರಸ್ತೆಯಲ್ಲಿ ಅಟ್ಟಾಡಿಸಿದ ದುಷ್ಕರ್ಮಿಗಳು ಮನಬಂದಂತೆ ಕೊಚ್ಚಿ ಪರಾರಿಯಾಗಿದ್ದಾರೆ. ತಲೆ, ಕೈ ಸೇರಿದಂತೆ ದೇಹದ ವಿವಿಧ ಭಾಗಳಿಗೆ ಮನಬಂದಂತೆ ಬಿದ್ದ ಏಟುಗಳಿಂದ ಗಂಭೀರ ಗಾಯಗೊಂಡ ಮಾಸ್ತಿಗೌಡ ಕೆಲವು ನಿಮಿಷಗಳ ನಂತರ ಮೃತಪಟ್ಟಿದ್ದಾನೆ.
ಪಟ್ಟಣದಲ್ಲಿ ಆಗಾಗ್ಗೆ ರೌಡಿ ಶೀಟರ್ಗಳ ಹೊಡೆದಾಟ, ಬಡಿದಾಟ ಮರುಕಳಿಸುತ್ತಿದ್ದು, ಮಾಸ್ತಿಗೌಡನ ಬರ್ಬರ ಕೊಲೆಯಿಂದ ಇದೀಗ ಚನ್ನರಾಯಪಟ್ಟಣ ಜನತೆ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಚನ್ನರಾಯಪಟ್ಟಣ ಡಿವೈಎಸ್ಪಿ ರವಿಪ್ರಸಾದ್, ನಗರ ಠಾಣೆ ಇನ್ಸ್ಪೆಕ್ಟರ್ ಕೆ.ಎಂ. ವಸಂತ್, ಶ್ವಾನದಳ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.