ಇಂಗ್ಲೆಂಡ್ ವಿರುದ್ಧ ನಡೆದ ಹೈದರಾಬಾದ್ ನ ಟೆಸ್ಟ್ ನಲ್ಲಿ ಮೊದಲ ಇನಿಂಗ್ಸ್ ನಲ್ಲಿ 190 ರನ್ ಗಳ ಬೃಹತ್ ಮುನ್ನಡೆ ಪಡೆದರೂ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 28 ರನ್ ಗಳಿಂದ ಸೋಲು ಕಂಡಿದೆ. ಪಂದ್ಯದ ಸೋಲಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳ ವೈಫಲ್ಯವೇ ಕಾರಣವಾಗಿದ್ದರೂ, ಹೆಡ್ ಕೋಚ್ ರಾಹುಲ್ ದ್ರಾವಿಡ್ ಆಟಗಾರರನ್ನು ಸಮರ್ಥಿಸಿಕೊಂಡಿದ್ದಾರೆ.
ತವರಿನ ಅಂಗಣದಲ್ಲಿ ಮೊದಲ ಇನಿಂಗ್ಸ್ ನಲ್ಲಿ 100 ಅಥವಾ ಅದಕ್ಕಿಂತಲೂ ಹೆಚ್ಚು ರನ್ ಮುನ್ನಡೆ ಪಡೆದ ನಂತರ ಸೋಲು ಕಂಡ ಮೊದಲ ನಿದರ್ಶನ ಇದಾಗಿದೆ. ಆ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಹಿನ್ನಡೆ ಅನುಭವಿಸಿದೆ.
ಪಂದ್ಯ ಮುಗಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್, ಹೈದರಾಬಾದ್ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ನಾವು ಉತ್ತಮ ಬ್ಯಾಟಿಂಗ್ ನಡೆಸಿಲ್ಲ ಮತ್ತು ಮೊದಲ ಇನಿಂಗ್ಸ್ ನಲ್ಲಿ 70 ರನ್ ಕಡಿಮೆ ಗಳಿಸಿದ್ದೆ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.
“ಮೊದಲ ಇನಿಂಗ್ಸ್ ನಾವು 70 ರನ್ ಕಡಿಮೆ ಗಳಿಸಿದ್ದೆ ಸೋಲಿಗೆ ಕಾರಣ ಎಂದೆನಿಸುತ್ತದೆ. ನಾವು ಪಂದ್ಯದ ಎರಡನೇ ದಿನ ಬ್ಯಾಟಿಂಗ್ ನಡೆಸುವಾಗ ಪಿಚ್ ರನ್ ಗಳಿಸಲು ಅತ್ಯುತ್ತಮವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ನಾವು ಉತ್ತಮ ಪ್ರದರ್ಶನ ತೋರಿಸಬೇಕು. ಅಲ್ಲದೆ ನಾವು ಒಳ್ಳೆ ಆರಂಭ ಪಡೆದಿದ್ದೆವು. ಆದರೆ ಅದನ್ನು ಬಳಸಿಕೊಳ್ಳುವಲ್ಲಿ ಎಡವಿದೆವು,” ಎಂದು ಟೀಮ್ ಇಂಡಿಯಾದ ಹೆಡ್ ಕೋಚ್ ಹೇಳಿದ್ದಾರೆ.