ಬೆಂಗಳೂರು: ಶಂಕಿತ ಉಗ್ರರ (Suspected Terrorist) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ನಾಸಿರ್ನನ್ನು ಸಿಸಿಬಿ ವಶಕ್ಕೆ ಪಡೆದಿದೆ. ಈಗಾಗಲೇ ಬೇರೊಂದು ಪ್ರಕರಣದಲ್ಲಿ ಜೈಲಿನಲ್ಲಿ ಇರುವ ನಾಸಿರ್ನನ್ನು ಶುಕ್ರವಾರದಿಂದ 8 ದಿನಗಳ ಕಾಲ ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸಲು ಅವಕಾಶ ನೀಡಿದ್ದು, ಪ್ರಕರಣದ ಪ್ರಮುಖ ಅಂಶಗಳನ್ನು ಬಯಲಿಗೆ ಎಳೆಯಲು ಸಿಸಿಬಿ (CCB) ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಬ್ಲಾಸ್ಟ್ ನಡೆಸಲು ಯೋಜನೆ ರೂಪಿಸಿದ್ದ ಶಂಕಿತರೆಲ್ಲರ ಅಕೌಂಟ್ಗೆ ವಿದೇಶದಿಂದ 26 ಲಕ್ಷ ರೂ. ಹಣ ವರ್ಗಾವಣೆಯಾಗಿರುವುದು ತನಿಖೆಯ ವೇಳೆ ಬಯಲಾಗಿದೆ. ಕಳೆದ ಆರು ತಿಂಗಳಿನಿಂದ ಬೇರೆ ಬೇರೆ ವ್ಯಕ್ತಿಗಳ ಜೊತೆಯಲ್ಲಿ ಸಂಪರ್ಕದಲ್ಲಿದ್ದ ಆರೋಪಿಗಳಿಗೆ ಹಣ ವರ್ಗಾವಣೆಯಾಗಿದೆ.
ನಾಲ್ಕು ಗ್ರೆನೇಡ್ಗಳು ಮಾತ್ರ ಪತ್ತೆಯಾಗಿದ್ದಲ್ಲದೇ ಬೇರೆಡೆಗೂ ಗ್ರೆನೇಡ್ಗಳನ್ನು ಕಳುಹಿಸಲಾಗಿದೆ ಎಂಬುದು ತಿಳಿದುಬಂದಿದೆ. ಇದನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಸಿಸಿಬಿ ನ್ಯಾಯಾಲಯಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಗಳು ಮತ್ತೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದು, ಅವರ ಬಳಿ ಇನ್ನೊಂದಷ್ಟು ಮಾಹಿತಿ ಪಡೆಯುತ್ತಿದ್ದಾರೆ.