ಬೆಂಗಳೂರು:- ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮನಿ ಡಬ್ಲಿಂಗ್ ಹೆಸ್ರಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಪ್ರಾಮ್ಯ ಇಂಟರ್ ನ್ಯಾಷನಲ್ ಅನ್ನೋ ನಕಲಿ ಕಂಪನಿ ಹೆಸರಲ್ಲಿ ಮಹಾಮೋಸವಾಗಿರುವುದು ಬೆಳಕಿಗೆ ಬಂದಿದೆ.
ಕನಕಪುರ ಮೂಲದ ಪ್ರದೀಪ್, ಆತನ ಪತ್ನಿ ಸೌಮ್ಯ, ಏಜೆಂಟ್ ವಂಸತ್ ಎಂಬುವವರಿಂದ ವಂಚನೆ ಆರೋಪ ಕೇಳಿ ಬಂದಿದೆ. ಸಾರ್ವಜನಿಕರಿಗೆ ಲಕ್ಷಲಕ್ಷ ಹಣಕ್ಕೆ ಆರೋಪಿಗಳು ಉಂಡೇನಾಮ ಹಾಕಿದ್ದಾರೆ. ಕೋಣನಕುಂಟೆ ಬಳಿ ಪ್ರದೀಪ್ ಕಚೇರಿ ತೆರೆದಿದ್ದ. ಅಧಿಕ ಬಡ್ಡಿ, ಅಧಿಕ ಲಾಭಾಂಶ ನೀಡೋದಾಗಿ ಗ್ರಾಹಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದು, ಮೊದಮೊದಲು ಲಾಭಾಂಶ ನೀಡಿ ನಂಬಿಕೆಗಳಿಸಿದ್ದ.
ನಂತರ ಹೂಡಿಕೆದಾರರಿಗೆ ಹಣ ನೀಡಲು ಸತಾಯಿಸಿದ್ದರು. ಖಚಿತ ಮಾಹಿತಿ ಮೇರೆಗೆ ಕಚೇರಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡಸಿದ ವೇಳೆ ಮಹಾಮೋಸ ಬೆಳಕಿಗೆ ಬಂದಿದೆ. ಸರ್ಕಾರದಿಂದ ಮಾನ್ಯತೆ ಪಡೆಯದೆ ಅನಧಿಕೃತವಾಗಿ ಕಂಪನಿ ಓಪನ್ ಆಗಿರುವುದು ತಿಳಿದು ಬಂದಿದೆ. ವಂಚನೆ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.