ಮಂಡ್ಯ: “ಕಾವೇರಿ ನೀರಿನ ಸಮಸ್ಯೆ ಕಾನೂನು ಪ್ರಕಾರ ಬಗೆಹರಿಸಲು ಆಗೋದಿಲ್ಲವೆಂದರೆ ಮಾತುಕತೆ ಮಾರ್ಗ ಅನಿವಾರ್ಯ. ಶತ್ರು ರಾಷ್ಟ್ರ ಪಾಕಿಸ್ತಾನದೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತದೆ. ಅದೇ ರೀತಿ ತಮಿಳುನಾಡಿನೊಂದಿಗೆ ಮಾತನಾಡಲು ಏಕೆ ಸಾಧ್ಯವಿಲ್ಲ? ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದರು. ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸಂಸದರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ಸಂಬಂಧಿಸಿ ರಾಜ್ಯ ಅಥವಾ ಕೇಂದ್ರ ಸರಕಾರ ಮಧ್ಯೆ ಪ್ರವೇಶ ಮಾಡಲು ಸಾಧ್ಯವಿಲ್ಲ.
ಕೇಂದ್ರದ ಬಳಿ ಕೀ ಇದ್ದಿದ್ದರೆ ಈ ಹಿಂದೆ ಯಾಕೆ ಅಂಬರೀಶ್ ರಾಜೀನಾಮೆ ಕೊಡುತ್ತಿದ್ದರು? ಎರಡೂ ರಾಜ್ಯದವರು ಕುಳಿತು ಪರಸ್ಪರ ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾವೇರಿ ವಿಚಾರದಲ್ಲಿ ಈ ಬಾರಿ ಸುಪ್ರೀಂ ಕೋರ್ಟಿನಿಂದ ನಮಗೆ ಪರಿಹಾರ ಸಿಗುವ ವಿಶ್ವಾಸವಿತ್ತು. ಆದರದು ಹುಸಿಯಾಗಿದ್ದು, ಕೋರ್ಟ್ ಆದೇಶದಿಂದ ಮತ್ತೆ ಅನ್ಯಾಯವಾಗಿದೆ. ಪದೇ ಪದೇ ಏಕೆ ಏಕೆ ಈ ರೀತಿ ಆಗುತ್ತಿದೆ ಎಂಬುದು ಗೊತ್ತಿಲ್ಲ. ಆದರೆ, ಕೋರ್ಟ್ ಆದೇಶ ಪಾಲಿಸುವುದು ಅನಿವಾರ್ಯವಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.