ತಂದೆಗೆ 2ನೇ ಮದುವೆ ಮಾಡಿಸಿದ ಮಗಳು..! ಏಕಾಂಗಿತನ ದೂರ ಮಾಡಿದ ಪುತ್ರಿ

ಥಿರುವಳ್ಳೂರು: ಪ್ರೀತಿಗೆ ವಯಸ್ಸು, ಜಾತಿ, ಧರ್ಮ ಏನೂ ಅಡ್ಡಿ ಬರುವುದಿಲ್ಲ. ಆದರೆ ಮದುವೆಗೆ? ಜಾತಿ ಧರ್ಮ ಅಲ್ಲದಿದ್ದರೂ ವಯಸ್ಸು ಸ್ವಲ್ಪ ಹೆಚ್ಚಾಗಿದ್ದರೂ ಮದುವೆ ಆಗಲು ಹಿಂದು ಮುಂದು ನೋಡುತ್ತಾರೆ. ಹುಡುಗನಿಗೆ ಅಷ್ಟು ವಯಸ್ಸಾಗಿದೆ, ಹುಡುಗಿಗೆ ಮದುವೆ ವಯಸ್ಸು ಮೀರಿದೆ ಎಂಬ ಮಾತುಗಳು ಕೇಳಿ ಬರುತ್ತದೆ. ಆದರೆ ಈಗ 60 ವರ್ಷದ ನಂತರವೂ ಮದುವೆ ಆಗುವ ಎಷ್ಟೋ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಆದರೆ ಮಗಳೊಬ್ಬಳು ತನ್ನ ತಂದೆಗೆ ಮರು ಮದುವೆ ಮಾಡಿದ್ದು, ಈ ಸುದ್ದಿ ಇದೀಗ ಭಾರೀ ವೈರಲ್​ ಆಗಿದೆ. 62 ವರ್ಷದ ರಾಧಾಕೃಷ್ಣ ಕುರುಪ್​ 60 ವರ್ಷದ ಮಲ್ಲಿಕಾಕುಮಾರಿ ಎಂಬಾಕೆಯನ್ನು ವರಿಸಿದ್ದಾರೆ. ಮೊದಲ ಹೆಂಡತಿಯನ್ನು ಕಳೆದುಕೊಂಡು ತೀವ್ರ ದುಃಖಿತನಾಗಿದ್ದ ತಂದೆಯ ಸ್ಥಿತಿಯನ್ನು ನೋಡಲಾಗದೇ ಮಗಳೇ ತನ್ನ ತಂದೆಗೆ ಸರಿಯಾದ ಜೋಡಿಯನ್ನು ಹುಡುಕಿ ಮದುವೆ ಮಾಡಿಸುವ ಮೂಲಕ ತಂದೆಗೆ ಸಂತೋಷದ ಕ್ಷಣಗಳನ್ನು ಮರಳಿ ನೀಡಿದ್ದಾರೆ. ಇಬ್ಬರ ಮದುವೆ ಕಾವುಂಭಗೊಮ್​ನಲ್ಲಿರುವ ತಿರು ಎರಂಕಾವು ಭಗವತಿ ದೇವಸ್ಥಾನದಲ್ಲಿ ನೆರವೇರಿತು.

ರಾಧಾಕೃಷ್ಣ ಕುರುಪ್​ ಅವರು ಮೂರು ದಶಕಗಳಿಂದ ಎರಾಂಕಾವು ದೇವಸ್ಥಾನದ ಬಳಿ ಸ್ಟೇಷನರಿ ಶಾಪ್​ ನಡೆಸುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಕುರುಪ್​ ಪತ್ನಿ, ಹೃದಯಾಘಾತದಿಂದ ಮೃತಪಟ್ಟರು. ಮತ್ತೊಂದೆಡೆ ಮಲ್ಲಿಕಾಕುಮಾರಿ ಪತಿ ಐದು ವರ್ಷಗಳ ಹಿಂದೆಯೇ ಕೊನೆಯುಸಿರೆಳೆದಿದ್ದಾರೆ. ಮಲ್ಲಿಕಾಗೆ ಮಕ್ಕಳಿಲ್ಲ. ಹೀಗಾಗಿ ಐದು ವರ್ಷಗಳಿಂದ ಏಕಾಂಗಿ ಜೀವನ ಸಾಗಿಸುತ್ತಿದ್ದರು.

ರಾಧಾಕೃಷ್ಣ ಕುರುಪ್​ಗೆ ರಶ್ಮಿ, ರೆಂಜು ಮತ್ತು ರಂಜಿತ್​ ಹೆಸರಿನ ಮೂವರು ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಮಗ ರಂಜಿತ್​ ಕೊಲ್ಲಂನ ಹಾಸ್ಟೆಲ್​ನಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪತ್ನಿಯ ಅಗಲಿಕೆಯಿಂದ ಏಕಾಂಗಿತನ ಅನುಭವಿಸುತ್ತಿದ್ದರು. ಇದೇ ವಿಚಾರವಾಗಿ ನಿತ್ಯವು ಕೊರಗುತ್ತಿದ್ದರು ಮತ್ತು ತುಂಬಾ ದುಃಖದಲ್ಲಿ ಇರುತ್ತಿದ್ದರು. ವಿದೇಶದಲ್ಲಿದ್ದ ಮಗಳು ರೆಂಜು ಎರಡು ತಿಂಗಳ ಹಿಂದಷ್ಟೇ ತಂದೆಯನ್ನು ನೋಡಲೆಂದು ತವರಿಗೆ ಮರಳಿದ್ದರು. ಈ ವೇಳೆ ತಂದೆಯ ವಿಚಾರ ತಿಳಿದು ತುಂಬಾ ಬೇಸರ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ಒಂದು ನಿರ್ಧಾರಕ್ಕೆ ಬಂದ ರೆಂಜು, ಮುಂದಿನ ವಾರದಲ್ಲಿ ವಿದೇಶಕ್ಕೆ ಮರಳುವ ಮುನ್ನ ತನ್ನ ತಂದೆಗೆ ಸೂಕ್ತ ವಧು ಹುಡುಕಬೇಕು ಅಂದುಕೊಂಡರು. ಅಲ್ಲಿಂದಾಚೆಗೆ ಸ್ವಲ್ಪವೂ ಸಮಯ ವ್ಯರ್ಥ ಮಾಡದೇ ವಧುವನ್ನು ಹುಡುಕಲು ರೆಂಜು ಆರಂಭಿಸಿದರು.

ಮ್ಯಾಟ್ರಿಮೊನಿ ವೆಬ್​ಸೈಟ್​ ಮೂಲಕ ಮಲ್ಲಿಕಾಕುಮಾರಿ ಬಯೋಡೆಟಾ ಕುರುಪ್​ ಅವರ ಕುಟುಂಬಕ್ಕೆ ಲಭ್ಯವಾಯಿತು. ಬಳಿಕ ಆಕೆಯನ್ನು ಸಂಪರ್ಕಿಸಿದಾಗ ಇಬ್ಬರ ಮದುವೆ ಮಲ್ಲಿಕಾಕುಮಾರಿ ಕುಟುಂಬದವರು ಸಹ ಒಪ್ಪಿಗೆ ನೀಡಿದರು. ಇದಾದ ಬಳಿಕ ಮದುವೆಗೆ ಮುಹೂರ್ತ ಫಿಕ್ಸ್​ ಮಾಡಲಾಯಿತು. ಅದರಂತೆ ಕಳೆದ ಶುಕ್ರವಾರ ಕಾವುಂಭಗೊಮ್​ನಲ್ಲಿರುವ ತಿರು ಎರಂಕಾವು ಭಗವತಿ ದೇವಸ್ಥಾನದಲ್ಲಿ ಸುಮಾರು 50 ಸಂಬಂಧಿಕರ ಸಮ್ಮುಖದಲ್ಲಿ, ರಾಧಾಕೃಷ್ಣ ಕುರುಪ್​, ಮಲ್ಲಿಕಾಕುಮಾರಿಗೆ ಕೊರಳಿಗೆ ತಾಳಿ ಕಟ್ಟಿದರು. ಇದೀಗ ಕುರುಪ್​ ಅವರಿಗೆ ಜೀವನದ ಕೊನೆಯ ಹಂತದಲ್ಲಿ ಒಂದು ಆಸರೆ ದೊರೆತಂತಿದೆ. ಮಲ್ಲಿಕಾಗೂ ತನ್ನ ಏಕಾಂಗಿತನವನ್ನು ದೂರ ಮಾಡುವ ಒಂದು ಜೀವ ದೊರೆತಿದೆ.

 

Loading

Leave a Reply

Your email address will not be published. Required fields are marked *