ಮಂಡ್ಯ: ದುಷ್ಕರ್ಮಿಯೊಬ್ಬ ಮಗಳ ಮುಂದೆಯೇ ಮಹಿಳೆಗೆ ಚಾಕು ಇರಿದು ಹತ್ಯೆಗೈದಿರುವ ಘಟನೆ ಪಾಂಡವಪುರದ ಎಲೆಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪಾರ್ವತಮ್ಮ (50) ಹತ್ಯೆಗೀಡಾದ ದುರ್ದೈವಿ. ಮಹಿಳೆ ಆಕೆಯ ಮಗಳು ಅರ್ಪಿತಾಳೊಂದಿಗೆ ಮನೆ ದೇವರ ಪೂಜೆ ಮುಗಿಸಿಕೊಂಡು ವಾಪಸ್ ಮನೆಗೆ ಬರುವಾಗ ವ್ಯಕ್ತಿಯೊಬ್ಬ ಅವರನ್ನು ಹಿಂಲಿಸಿಕೊಂಡು ಬಂದಿದ್ದಾನೆ. ಇದರಿಂದ ಗಾಬರಿಗೊಂಡ ತಾಯಿ ಮಗಳು ವೇಗವಾಗಿ ನಡೆಯಲು ಪ್ರಾರಂಭಿಸಿದ್ದು, ಈ ವೇಳೆ ಆತ ಬಂದು ಮಹಿಳೆಯ ಹೊಟ್ಟೆಯ ಭಾಗಕ್ಕೆ ಚಾಕು ಇರಿದು ಪರಾರಿಯಾಗಿದ್ದಾನೆ.
ಮಹಿಳೆಯ ಮನೆಯ ಅರ್ಧ ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ. ಯಾವ ಕಾರಣಕ್ಕೆ ಮಹಿಳೆಯ ಕೊಲೆ ನಡೆದಿದೆ ಎಂಬ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.