ಬೆಂಗಳೂರು: ಇಂದು ಜೆಡಿಎಸ್ ಕಾರ್ಯಕರ್ತರ ಸಮಾವೇಶ ಇದ್ದು ಇವತ್ತು ಎಲ್ಲರ ಮುಂದೆ ಮೈತ್ರಿ ವಿಚಾರ ಚರ್ಚಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ. ಬೆಂಗಳೂರು ಅರಮನೆ ಮೈದಾನದಲ್ಲಿಂದು ಜೆಡಿಎಸ್ (JDS) ಪಕ್ಷದ ಮಹತ್ವದ ಸಭೆ ನಡೆಯುತ್ತಿದ್ದು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Devegowda) ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.
ಜೆಡಿಎಸ್ ಹಾಲಿ, ಮಾಜಿ ಶಾಸಕರು, ಜಿಲ್ಲಾ, ತಾಲೂಕು, ಬೂತ್ ಮಟ್ಟದ ಅಧ್ಯಕ್ಷರು, ಕಾರ್ಯದರ್ಶಿಗಳು ಪ್ರಮುಖರು ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದೇ ಸಭೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ (BJP-JDS Alliance) ವಿಷಯವನ್ನ ಚರ್ಚಿಸಲು ವರಿಷ್ಟರು ಮುಂದಾಗಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ, ಇವತ್ತಿನ ಸಮಾವೇಶದಲ್ಲಿ ಪಕ್ಷ ಬಲ ಪಡಿಸುವ ಬಗ್ಗೆ ಚರ್ಚೆ ಮಾಡ್ತೀವಿ. ಪಕ್ಷದ ಮಟ್ಟದಲ್ಲಿ ದೋಸ್ತಿ ಬಗ್ಗೆ ಈವರೆಗೆ ಚರ್ಚೆ ಆಗಿಲ್ಲ. ನಮ್ಮ ಪಕ್ಷ ಉಳಿಯಬೇಕು. ರಾಜ್ಯಕ್ಕೆ 3ನೇ ಶಕ್ತಿ ಬೇಕು. ಬಡ ವರ್ಗ, ದಲಿತ ವರ್ಗಕ್ಕೆ ಒಂದು ಪಕ್ಷ ಬೇಕು. ಅದಕ್ಕಾಗಿ ಜಿಲ್ಲಾ ತಾಲೂಕು ಮಟ್ಟದ ಮುಖಂಡರು ಇವತ್ತಿನ ಸಭೆಗೆ ಹಾಜರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.