ನವದೆಹಲಿ: ದೇಶಾದ್ಯಂತ ಟೊಮೆಟೋ ದರ ಭಾರಿ ಏರಿಕೆ ಕಂಡು ಬಂದಿದೆ. ಇದರಿಂದಾಗಿ ಜನ ಸಾಮಾನ್ಯರು ಕಂಗಾಲಾಗಿದ್ದು ಯಾವಾಗ ಟೊಮೊಟೋ ದರ ಕಮ್ಮಿಯಾಗುತ್ತೆ ಎಂದು ಕಾದು ಕೂತಿದ್ದಾರೆ. ಇದೀಗ ಕೇಂದ್ರ ಸರ್ಕಾರವು ಬೆಲೆ ಏರಿಕೆಗೆ ಬ್ರೇಕ್ ಹಾಕಲು ಮುಂದಾಗಿದೆ.
ಕಳೆದ ಒಂದು ತಿಂಗಳಿಂದ ಟೊಮೆಟೋ ದರ ಗಗನಕ್ಕೇರಿದೆ.
ಇದೀಗ ದರ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ, ಮಹಾರಾಷ್ಟ್ರ, ಆಂಧ್ರದ ಮಂಡಿಗಳಿಂದ ಟೊಮೆಟೋ ಖರೀದಿಸಿ ಸಾರ್ವಜನಿಕರಿಗೆ ವಿತರಣೆ ಮಾಡುವಂತೆ ಸಹಕಾರಿ ಸಂಸ್ಥೆಗಳಾದ ನಾಫೆಡ್ ಮತ್ತು ಎನ್‍ಸಿಸಿಎಫ್‍ಗೆ ನಿರ್ದೇಶನ ನೀಡಿದೆ.
ಭಾರೀ ಮಳೆಯಿಂದಾಗಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಟೊಮೆಟೋ ದರ 200 ರೂಪಯಿಯ ಗಡಿ ದಾಟಿದೆ. ಹೀಗಾಗಿ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ದಕ್ಷಿಣದ ರಾಜ್ಯಗಳಿಂದ ಟೊಮೆಟೋ ಖರೀದಿಸಲಿದೆ.
ಜುಲೈ-ಆಗಸ್ಟ್ ಮತ್ತು ಅಕ್ಟೋಬರ್-ನವೆಂಬರ್ ಸಾಮಾನ್ಯವಾಗಿ ಟೊಮೆಟೋಗಳಿಗೆ ಕಡಿಮೆ ಉತ್ಪಾದನೆಯ ತಿಂಗಳುಗಳಾಗಿವೆ. ಆದರೆ ಇದು ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ದರ ಏರಿಕೆ ಈ ತಿಂಗಳುಗಳಲ್ಲಿ ಸಾಮಾನ್ಯವಾಗಿರುತ್ತದೆ. ಆಗಸ್ಟ್ ಹೊತ್ತಿಗೆ ಟೊಮೆಟೋ ದರ ಇಳಿಯಬಹುದು ಎಂದು ಅಂದಾಜಿಸಲಾಗಿದೆ.