ಧಾರವಾಡ: ಮೊದಲೇ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಅನ್ನದಾತ ಕಂಗಾಲಾಗಿದ್ದಾನೆ. ಹೀಗಿರುವಾಗ ಕಿಡಿಗೇಡಿಗಳು ರೈತರೊಬ್ಬರ ಹತ್ತಿ ಬೆಳೆಗೆ ರಾತ್ರೋರಾತ್ರಿ ಕಳೆನಾಶಕ ಹೊಡೆದು ಹತ್ತಿ ಬೆಳೆ ನಾಶಪಡಿಸಿರುವ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ.
ಗರಗ ಗ್ರಾಮದ ರೈತ ಗಂಗಪ್ಪ ಬಾರ್ಕಿ ಎಂಬ ರೈತ ತನ್ನ ಒಂದೂವರೆ ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆ ಬೆಳೆದಿದ್ದ. ಮಳೆ ಇಲ್ಲದ್ದರಿಂದ ನೀರು ಹಾಯಿಸಿ ಹತ್ತಿ ಬೆಳೆದಿದ್ದ. ಸೊಂಪಾಗಿ ಬೆಳೆದ ಹತ್ತಿಯ ಫಸಲು ಇನ್ನೇನು ಕೈಸೇರಬೇಕು ಎನ್ನುವಷ್ಟರಲ್ಲಿ ಕಿಡಿಗೇಡಿಗಳು ರಾತ್ರೋರಾತ್ರಿ ಹತ್ತಿ ಬೆಳೆಗೆ ಕಳೆನಾಶಕ ಹೊಡೆದಿದ್ದಾರೆ.
ಇದರಿಂದ ಹತ್ತಿ ಬೆಳೆ ಒಣಗುವಂತಾಗಿದೆ. ದಸರಾ ಸಂಭ್ರಮದಲ್ಲಿದ್ದ ರೈತನ ಕಣ್ಣಲ್ಲಿ ಈ ಘಟನೆ ಕಣ್ಣೀರು ತರಿಸಿದೆ. ರಾತ್ರೋರಾತ್ರಿ ಕಳೆನಾಶಕ ಹೊಡೆದು ಹೋಗಿರುವ ಕಿಡಿಗೇಡಿಗಳು ಯಾವುದೋ ಹಳೆಯ ದ್ವೇಷಕ್ಕೆ ಹೀಗೆ ಮಾಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಸದ್ಯ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ರೈತ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.