ಹೊಟೇಲ್ ಬಳಿ ಯುವತಿಯನ್ನ ಟಚ್ ಮಾಡಿ ವಿಕೃತಿ ಮರೆದಿದ್ದ ಆರೋಪಿಯ ಬಂಧನ

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಬೆಂಗಳೂರಿನಲ್ಲಿ ಹೆಣ್ಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಹೌದು ಹೋಟೆಲ್‌ಗೆ ಬಂದ ಯುವತಿಯನ್ನು ಅಸಭ್ಯವಾಗಿ ಸ್ಪರ್ಶಿಸುವ ಮೂಲಕ ಲೈಂಗಿಕ‌ ಕಿರುಕುಳ ನೀಡಿದ್ದ ಆರೋಪಿಯನ್ನ ವಿಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹಂಪಿನಗರದ ನಿವಾಸಿ ಚಂದನ್ ಬಂಧಿತ ಆರೋಪಿ. ಡಿಸೆಂಬರ್ 30ರ ಸಂಜೆ ವಿಜಯನಗರದ ಆರ್.ಪಿ.ಸಿ ಲೇಔಟ್​ನಲ್ಲಿರುವ ಖಾಸಗಿ ಹೋಟೆಲ್‌ಗೆ ಬಂದಿದ್ದ ಆರೋಪಿ, ಕ್ಯಾಶಿಯರ್ ಕೌಂಟರ್​ನಲ್ಲಿ ನಿಂತಿದ್ದ ಯುವತಿಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದ. ತಡವಾಗಿ ಅಂದರೆ, ಜನವರಿ 10ರಂದು ಹೋಟೆಲ್ ಕ್ಯಾಶಿಯರ್ ನೀಡಿದ್ದ ದೂರಿನ ಅನ್ವಯ ವಿಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಗ್ಯಾಸ್ ಡಿಲೆವರಿ ಕೆಲಸ ಮಾಡುತ್ತಿದ್ದ ಆರೋಪಿ ಡಿಸೆಂಬರ್ 30ರಂದು ತನ್ನ ಇಬ್ಬರು ಸ್ನೇಹಿತರೊಂದಿಗೆ ಹೋಟೆಲ್‌ಗೆ ಬಂದಿದ್ದ. ಇದೇ ಸಂದರ್ಭದಲ್ಲಿ ಹೋಟೆಲ್‌ಗೆ ಬಂದಿದ್ದ ಯುವತಿಯನ್ನು ಸ್ಪರ್ಶಿಸುವಂತೆ ಆರೋಪಿಯ ಸ್ನೇಹಿತನೊಬ್ಬ ಸವಾಲೆಸೆದಿದ್ದನಂತೆ. ಇದರಿಂದ ಪ್ರೇರಿತನಾಗಿ ಕ್ಯಾಶ್ ಕೌಂಟರ್ ಬಳಿ ನಿಂತಿದ್ದ ಯುವತಿಯನ್ನು ಆರೋಪಿ ಉದ್ದೇಶಪೂರ್ವಕವಾಗಿಯೇ ಅಸಭ್ಯವಾಗಿ ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದ್ದ. ಆರೋಪಿಯ ಕೃತ್ಯ ಹಾಗೂ ಆತನ ಕೃತ್ಯವನ್ನು ಉಳಿದಿಬ್ಬರು ಆರೋಪಿಗಳು ನೋಡಿ ಖುಷಿ ಪಡುತ್ತಿರುವ ದೃಶ್ಯಗಳು ಹೋಟೆಲ್​ನಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು.

ಆರೋಪಿಯ ಕೃತ್ಯವನ್ನು ಪ್ರತಿರೋಧಿಸಿದ್ದ ಯುವತಿ ಅವರೊಂದಿಗೆ ವಾಗ್ವಾದ ನಡೆಸಿದ್ದಳು. ಈ ವೇಳೆ ಅಕ್ಕಪಕ್ಕದವರು ಜಮಾಯಿಸಲಾರಂಭಿಸುತ್ತಿದ್ದಂತೆ ಮೂವರು ಆರೋಪಿಗಳು ಪರಾರಿಯಾಗಿದ್ದರು. ಘಟನೆ ಸಂಬಂಧ ಹೋಟೆಲ್ ಕ್ಯಾಶಿಯರ್ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಳಿಕ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

Loading

Leave a Reply

Your email address will not be published. Required fields are marked *