ಮಕ್ಕಳ ಮನಸ್ಸಿಗೆ ವಿಷ ತುಂಬುವ ಪಠ್ಯ ಮತ್ತು ಪಾಠಗಳಿಗೆ ಅವಕಾಶ ಕೊಡುವುದಿಲ್ಲ

ಬೆಂಗಳೂರು: ಕನ್ನಡ ನಾಡಿನ ಸೌಹಾರ್ಧ ಮತ್ತು ಜಾತ್ಯತೀತ ಪರಂಪರೆಯ ರಕ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ದ್ವೇಷ ರಾಜಕಾರಣವನ್ನು ಬಲಿ ಹಾಕಿ, ಭಯದ ವಾತಾವರಣ ಅಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗೃಹ ಕಚೇರಿ ಕೃಷ್ಣದಲ್ಲಿ ಸುಮಾರು 40 ಕ್ಕೂ ಹೆಚ್ಚು ಮಂದಿ ಸಾಹಿತಿ ಬರಹಗಾರರು ಹಾಗೂ ನಾನಾ ಜನಪರ ಸಂಘಟನೆಗಳ ಮುಖ್ಯಸ್ಥರ ಜತೆಗೆ ನಡೆದ ಸಭೆಯಲ್ಲಿ ಈ ಭರವಸೆ ನೀಡಿದರು.

ದೇಶವನ್ನು ಅಪಾಯದ ಸುಳಿಗೆ ದೂಡುತ್ತಾ , ಈ‌ ಮಣ್ಣಿನ ಬಹುತ್ವವನ್ನು ನಾಶ ಮಾಡುತ್ತಿರುವ ಬಿಜೆಪಿ ಪರಿವಾರದ ವಿರುದ್ಧ ಖಚಿತ ನಿಲುವು ತೆಗೆದುಕೊಂಡು ಸ್ವಯಂಪ್ರೇರಿತವಾಗಿ ಈ ಚುನಾವಣೆಯಲ್ಲಿ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಕ್ಕಾಗಿ ಸಾಹಿತಿ-ಬರಹಗಾರರಿಗೆ ಅಭಿನಂದನೆ ಸಲ್ಲಿಸಿ ಮೇಲಿನ ಭರವಸೆ ನೀಡಿದರು.

* ಪಠ್ಯ ಮತ್ತು ಪಾಠಗಳ ಮೂಲಕ ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ನಡೆಸಿರುವ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಶೈಕ್ಷಣಿಕ ವರ್ಷ ಆರಂಭ ಆಗಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ.

* ಕನ್ನಡ ಹೋರಾಟಗಾರರು, ರೈತ-ಕಾರ್ಮಿಕ-ದಲಿತ ಚಳವಳಿಗಳ ಹೋರಾಟಗಾರರು ಮತ್ತು ಸಾಹಿತಿ, ಬರಹಗಾರರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು.

* ಹೊಸ ಶಿಕ್ಷಣ ನೀತಿ ಹೆಸರಲ್ಲಿ ಶಿಕ್ಷಣ ಕ್ಷೇತ್ರವನ್ನು ಗಬ್ಬೆಬ್ಬಿಸಲು ಅವಕಾಶ ಕೊಡುವುದಿಲ್ಲ. ಈ ಬಗ್ಗೆ ಮತ್ತೊಮ್ಮೆ ಪ್ರತ್ಯೇಕವಾದ ಸಭೆ ಕರೆದು ಸಮಗ್ರವಾಗಿ ಚರ್ಚಿಸಿ ನಿಷ್ಠುರವಾದ ಮತ್ತು ಖಚಿತವಾದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು.

* ಅನೈತಿಕ ಪೊಲೀಸ್ ಗಿರಿ, ದ್ವೇಷದ ರಾಜಕಾರಣ, ತೇಜೋವಧೆ ಮಾಡುವ ಟ್ರೋಲ್ ಗಳು ಮತ್ತು ಸಾಹಿತಿಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಈಗಾಗಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಿದ್ದೇನೆ.

* ಉಳಿದಂತೆ ಸಾಹಿತಿ ಬರಹಗಾರರು ನೀಡಿರುವ ಮನವಿ ಪತ್ರದಲ್ಲಿನ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಅಗತ್ಯಕ್ಕೆ ತಕ್ಕಂತೆ ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ.

Loading

Leave a Reply

Your email address will not be published. Required fields are marked *