ನವದೆಹಲಿ: ಚಂದ್ರಯಾನ-3 (Chandrayaan-3), ಸೂರ್ಯಯಾನ (Aditya L1) ಯಶಸ್ಸಿನ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಾನವ ಸಹಿತ ಗಗನಯಾನಕ್ಕೆ (Gaganyaan Mission) ಸಜ್ಜಾಗಿದೆ. ಇದೇ ತಿಂಗಳ 21 ರಂದು ಪರೀಕ್ಷಾರ್ಥ ಉಡಾವಣೆ ನಡೆಸಲಾಗುವುದು ಎಂದು ಇಸ್ರೋ ತಿಳಿಸಿದೆ. ಅ.21 ರಂದು ಬೆಳಗ್ಗೆ 7 ಮತ್ತು 9 ಗಂಟೆ ನಡುವಿನಲ್ಲಿ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಲ್ಲಿ ಮಾನವರಹಿತ ಗಗನಯಾನ ಪರೀಕ್ಷಾರ್ಥ ಉಡಾವಣೆ ನಡೆಯಲಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಇಸ್ರೋ ಪೋಸ್ಟ್ ಮಾಡಿದೆ.
ಗಗನಯಾನ ಮಿಷನ್ನಡಿ ನಾಲ್ಕು ಪರೀಕ್ಷಾರ್ಥ ಉಡಾವಣೆ ನಡೆಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ತಿಳಿಸಿದ್ದರು. ಅ.21 ರಂದು ಟಿವಿ-ಡಿ1 ಪರೀಕ್ಷಾರ್ಥ ಉಡಾವಣೆ ಮಾಡಲಾಗುವುದು. ಇದರ ಬಳಿಕ ಟಿವಿ-ಡಿ2, ಟಿವಿ-ಡಿ3 ಮತ್ತು ಟಿವಿ-ಡಿ4 ಹೀಗೆ ಇನ್ನೂ ಮೂರು ಪರೀಕ್ಷಾರ್ಥ ಉಡಾವಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಕ್ರೂ ಎಸ್ಕೇಪ್ ಸಿಸ್ಟಂನ ಕಾರ್ಯಕ್ಷಮತೆ ಪ್ರದರ್ಶಿಸುವ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (ಟಿವಿ-ಡಿ1) ಗಾಗಿ ಸಿದ್ಧತೆ ನಡೆಯುತ್ತಿವೆ ಎಂದು ಇಸ್ರೋ ಇತ್ತೀಚೆಗೆ ಹೇಳಿತ್ತು. ಮೊದಲ ಪರೀಕ್ಷಾರ್ಥ ಉಡಾವಣೆ ಭಾಗವಾಗಿರುವ ಫ್ಲೈಟ್ ಟೆಸ್ಟ್ ವೆಹಿಕಲ್ (ಟಿವಿ-ಡಿ1) ತಯಾರಿಯ ಅಂತಿಮ ಹಂತದಲ್ಲಿದೆ.