ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪತ್ನಿಯ ಮೇಳೆ ಅನುಮಾನ ಪಟ್ಟ ಪತಿ ಆಕೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಪತ್ನಿಯ ಮೇಲೆ ಅನುಮಾನ ಪಟ್ಟ ಪತಿ, ಪತ್ನಿ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾರ್ ಸ್ಟ್ರೀಟ್ ನಲ್ಲಿ ನಡೆದಿದೆ. ಇಂದು ರಾತ್ರಿ 9:45 ರ ಸುಮಾರಿಗೆ ಘಟನೆ ನಡೆದಿದ್ದು, ಗಾಯಾಳು ಪತ್ನಿ ಪ್ರಿಯಾಂಕಳನ್ನು ಹೊಯ್ಸಳ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆರೋಪಿ ಪತಿ ದಯಾನಂದ @ ನಂದ ಘಟನೆ ಬಳಿಕ ಪರಾರಿಯಾಗಿದ್ದಾನೆ. ನೀಲಸಂದ್ರದ ದಯಾನಂದ ಎಂಬಾತ ಪ್ರಿಯಾಂಕಳನ್ನ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಸದಾ ಕುಡಿದು ಬಂದು ಪತ್ನಿ ಮೇಲೆ ಅನುಮಾನ ಪಟ್ಟು ಗಲಾಟೆ ಮಾಡುತ್ತಿದ್ದ ಪತಿರಾಯ, ಇಂದು ಕೂಡಾ ಕಂಠ ಪೂರ್ತಿ ಕುಡಿದು ಮನೆಗೆ ಬಂದು ಮಲಗಿದ್ದ ಪತ್ನಿಯ ಜೊತೆ ಜಗಳ ತೆಗೆದು ಮಕ್ಕಳ ಎದುರೇ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದಾನೆ. ನೋವಿನಿಂದ ಪತ್ನಿ ಕಿರುಚಾಡುತ್ತಿದ್ದಂತೆ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಸ್ಥಳೀಯರು 112ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಹೊಯ್ಸಳದ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.