ವೆಸ್ಟ್ ಇಂಡೀಸ್: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ವಿಶ್ವದ ನಂ.1 ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್ ಅವರಿಂದ ಮೂಡಿಬಂದ ಮತ್ತೊಂದು ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಗುಣಗಾನ ಮಾಡಿದ್ದಾರೆ.
ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿದ್ದ ಭಾರತ ತಂಡಕ್ಕೆ ಆಸರೆಯಾಗಿ ನಿಂತ ಸೂರ್ಯಕುಮಾರ್ ಯಾದವ್, ಕೇವಲ 44 ಎಸೆತಗಳಲ್ಲಿ 83 ರನ್ ಸಿಡಿಸಿ ಜಯದ ರೂವಾರಿಯಾದರು. 7 ವಿಕೆಟ್ಗಳ ಭರ್ಜರಿ ಜಯದೊಂದಿಗೆ ಟೀಮ್ ಇಂಡಿಯಾ ಸರಣಿಯಲ್ಲಿ ಖಾತೆ ತೆರೆದು ಅಂತರವನ್ನು 1-2ಕ್ಕೆ ತಂದಿದೆ.
“ಒಂದು ತಂಡವಾಗಿ ಈ ಗೆಲುವು ಅತ್ಯಂತ ಪ್ರಮುಖವಾದುದ್ದಾಗಿದೆ. ಆಟವನ್ನು ಆನಂದಿಸಲು ಇದು ಅತ್ಯಂತ ಪ್ರಮುಖ ಪಂದ್ಯವಾಗಿತ್ತು. ಇನ್ನು ನಮ್ಮ ಯೋಜನೆಗಳು ದೀರ್ಘಾವಧಿಯದ್ದು. ಇದೇ ಸಮಯದಲ್ಲಿ ನಮ್ಮ ಗುರಿ, ನಾವು ಹಾಕಿಕೊಂಡಿರುವ ಯೋಜನೆ ಏನು ಎಂಬುದನ್ನು ಜಗತ್ತಿಗೆ ತೋರಿಸಿಕೊಡಬೇಕಾಗುತ್ತದೆ,” ಎಂದು ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.