ಇಸ್ಲಾಮಾಬಾದ್: ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಅಡ್ವೊಕೇಟ್ ಅಬ್ದುಲ್ ರಜಾಕ್ ಶಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಜುಲೈ 24 ರಂದು ಬೆಳಿಗ್ಗೆ 10:30 ಕ್ಕೆ ಸುಪ್ರೀಂ ಕೋರ್ಟ್‌ಗೆ ಹಾಜರಾಗುವಂತೆ ಇಮ್ರಾನ್ ಖಾನ್ಗೆ ಕೋರ್ಟ್ ಸೂಚನೆ ನೀಡಿದೆ. ನ್ಯಾಯಮೂರ್ತಿ ಯಾಹ್ಯಾ ಖಾನ್ ಅಫ್ರಿದಿ ನೇತೃತ್ವದ ತ್ರಿಸದಸ್ಯ ಪೀಠವು ಇಮ್ರಾನ್ ಖಾನ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿದೆ. ಈ ವಿಚಾರಣೆಯ ಆರಂಭದಲ್ಲಿ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಅಧ್ಯಕ್ಷ ಲತೀಫ್ ಖೋಸಾ ಅವರ ಈ ಪ್ರಕರಣದ ವಿಚಾರಣೆಯನ್ನು ನಡೆಸದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಈಗಾಗಲೇ ಪಾಕ್ ಸರ್ಕಾರವು ರಚಿಸಿರುವ ಜಂಟಿ ತನಿಖಾ ತಂಡ (ಜೆಐಟಿ) ದೇಶದ ಕಾನೂನಿಗೆ ವಿರುದ್ಧವಾಗಿದೆ ಎಂದು ಲತೀಫ್ ಖೋಸಾ ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಮೊದಲು ಅವರು ನ್ಯಾಯಾಲಯಕ್ಕೆ ಶರಣಾಗಬೇಕು, ಮತ್ತೆ ಅವರ ಬಗ್ಗೆ ವಾದ ಮಾಡಿ ಎಂದು ನ್ಯಾಯಮೂರ್ತಿ ಯಾಹ್ಯಾ ಅಫ್ರಿದಿ ತಿಳಿಸಿದ್ದಾರೆ.