ಮಳೆಯ ನಾಡಿನಲ್ಲಿ ಬರದ ಛಾಯೆ, ಕೈಕೊಟ್ಟ ದೊಡ್ಡ ಮಳೆಗಳು..ಬರಿದಾಗುವತ್ತ ಜಿಲ್ಲೆಯ ಜಲಾಶಯಗಳು, ದಕ್ಷಿಣ ಭಾರತದ ಚಿರಾಪುಂಜಿ ಆಗುಂಬೆಯಲ್ಲೂ ಬತ್ತಿದ ಬಾವಿಗಳು..ತಗ್ಗಿದ ಹಿನ್ನೀರ ಪ್ರಮಾಣ. ಕುಗ್ಗಿದ ಹಿನ್ನೀರ ಒಳ ಹರಿವು, ತುಂಗಾ ಭದ್ರಾ ಲಿಂಗನಮಕ್ಕಿ ಮಾಣಿ ಜಲಾಶಯಗಳಲ್ಲಿ ದಿನದಿಂದ ದಿನಕ್ಕೂ ತಗ್ಗುತ್ತಿರುವ ನೀರು..ಇದು ಜಲಾಶಯಗಳ ಆಗರವಾಗಿರುವ ಶಿವಮೊಗ್ಗ ಜಿಲ್ಲೆಯ ಸದ್ಯದ ಚಿತ್ರಣ.. ದಿಗಂತದಲ್ಲಿ ಮೋಡಗಳ ಚಿತ್ತಾರ. ರೈತನ ಮೊಗದಲ್ಲಿ ಮಳೆಯ ಹಂಬಲ ಆದರೂ ಧರೆಗೆ ಮುತ್ತಿಕ್ಕದ ಮುಂಗಾರು ಮಳೆ ಜೂನ್ ಜುಲೈ ಆಗಸ್ಟ್ ಕಳೆದರೂ ಮಳೆ ಇಳೆಗೆ ಸರಿಯಾಗಿ ತಂಪೆರೆದಿಲ್ಲ.ಇದು ಶಿವಮೊಗ್ಗ ಜಿಲ್ಲೆಯ ಮುಂಗಾರು ಹಂಗಾಮ.
ಮಳೆಗೆ ಹೆಸರಾದ ಮಲೆನಾಡಿನಲ್ಲಿ ಆಗಸ್ಟ್ ತಿಂಗಳು ಆರಂಭವಾದ್ರೂ ಭೂಮಿಗೆ ಬೀಜ ಬಿತ್ತನೆ ಮಾಡದ ರೈತ ಕೊಂಚ ನಿರಾಸೆಯಿಂದ ನಿಲ್ಲಿ ಮೋಡಗಳೇ ಎಲ್ಲಿ ಹೋಗುವಿರಿ,ನಾಲ್ಕು ಹನಿಯ ಚೆಲ್ಲಿ ಎಂದು ಅಂಬರದತ್ತ ಮುಖ ಮಾಡಿದ್ದಾನೆ. ಈ ವರ್ಷದ ಕೃಷಿ ಚಟುವಟಿಕೆಯನ್ನು ಆರಂಭಿಸಿದ್ದರೂ ರೈತ ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾನೆ. ನಿತ್ಯವೂ ಆಗಸದಲ್ಲಿ ಮೋಡಗಳ ಚಕ್ಕಂದ ನಡೆಯುತ್ತಿದ್ದರೂ ಮೋಡ ಕರಗಿ ನಿರಾಗುತ್ತಿಲ್ಲ.ಮಲೆನಾಡಿನ ಕೆಲವೆಡೆ ಮಳೆಬಿದ್ದರೂ, ಮಲೆನಾಡಿನ ಅನುಭವ ಆಗುತ್ತಿಲ್ಲ ಎಂಬುದು ಆತಂಕದ ಪ್ರಶ್ನೆಯಾಗಿದೆ.ಭೂಮಿಯನ್ನು ಹಸನು ಮಾಡಿಕೊಂಡಿರುವ ರೈತ ಸಮುದಾಯ ಒಣ ಬಿತ್ತನೆ ಮಾಡಿದ್ದರೂ,ಎಂದು ಮಳೆ ಬಂದೀತು ಬಿತ್ತಿದ ಬೀಜ ಮೊಳಕೆಯೊಡೆದೀತು ಎಂಬ ನಿರೀಕ್ಷೆ ಗಂಟುಕಟ್ಟಿಕೊಂಡು ಮುಂಗಾರು ಮಳೆಗಾಗಿ ಹಂಬಲಿಸುತ್ತಿದ್ದಾನೆ.